ಮುಡಾ ಹಗರಣದ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ನೋಟಿಸ್ ನೀಡಿದ್ದಾರೆ. ನವೆಂಬರ್ 6ರಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಈ ರೀತಿಯ ವಿಚಾರಣೆ ಎದುರಿಸಬೇಕಾಗಿ ಬಂದಿದೆ. ಈಗಾಗಲೇ ಲೋಕಾಯುಕ್ತ ಎ2 ಪಾರ್ವತಿ ಸಿದ್ದರಾಮಯ್ಯ, ಎ3 ಮಲ್ಲಿಕಾರ್ಜುನ ಹಾಗೂ ಎ4 ದೇವರಾಜು ಸೇರಿ ಹಲವರ ವಿಚಾರಣೆಯನ್ನು ನಡೆಸಿದೆ. ಸಿದ್ದರಾಮಯ್ಯನವರ ವಿಚಾರಣೆಯೊಂದೇ ಬಾಕಿ ಇತ್ತು. ನೋಟಿಸ್ ಸಂಬಂಧ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಲೋಕಾಯುಕ್ತ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.
ವಕ್ಫ್ ಬೋರ್ಡ್ ಆಸ್ತಿ ವಿವಾದ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಸತ್ ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದು, ತಕ್ಷಣವೇ ವಕ್ಫ್ ಬೋರ್ಡ್ ಗೆ ಆಸ್ತಿ ನೋಂದಣಿಯನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ವಕ್ಫ್ ಮಂಡಳಿಯು ಕಂದಾಯ ದಾಖಲೆಗಳನ್ನು ತಿದ್ದುವ ಹಾಗೂ ರೈತರ ಜಮೀನುಗಳ ಮಾಲೀಕತ್ವ ವರ್ಗಾಯಿಸಿಕೊಳ್ಳುವ ಪ್ರಯತ್ನ ಆರಂಭಿಸಿದೆ. ಈ ರೀತಿ ತರಾತುರಿಯಲ್ಲಿ ಜಮೀನುಗಳನ್ನು ವಕ್ಫ್ ಮಂಡಳಿ ನೋಂದಾಯಿಸಿಕೊಳ್ಳುತ್ತಿರುವ ಪರಿಣಾಮ ಸಾವಿರಾರು ಬಡವರು ಹಾಗೂ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯು ಇಂದು ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಿದೆ. ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು. ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿರುವ ಬಿಜೆಪಿ ನಾಯಕರು ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿ ಎದುರು ಧರಣಿ ನಡೆಸಿ ವಕ್ಫ್ ನಿಂದ ರೈತರ ಜಮೀನು ವಶಪಡಿಸಿಕೊಳ್ಳುವುದನ್ನು ಖಂಡಿಸಿದರು. ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ಯಾವಾಗಲೂ ಸುಳ್ಳು ವಿಚಾರಗಳಿಗ್ಗಾಗಿಯೇ ಹೋರಾಟ ಮಾಡುತ್ತದೆ. ವಕ್ಫ್ ಆಸ್ತಿ ವಿಚಾರವಾಗಿ ಬಿಜೆಪಿ ಮಾಡುತ್ತಿರುವ ಪ್ರತಿಭಟನೆ ಕೇವಲ ರಾಜಕಾರಣಕ್ಕಾಗಿ ಎಂದು ಕುಟುಕಿದರು.
ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಎಐಸಿಸಿ ಸಭೆಗೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶೇಷ ಜಂಟಿ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದ್ದು, ಈ ಅಧಿವೇಶನಕ್ಕೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಕಾನೂನು ಸಚಿವ ಹಾಗೂ ಶತಮಾನೋತ್ಸವ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಾಂಧೀಜಿ ಕೇವಲ ಭಾರತದ ನಾಯಕನಲ್ಲ. ವಿಶ್ವ ನಾಯಕ ಎಂದು ಸಾರುವ ಗಾಂಧಿ ಅನುಯಾಯಿ, ಅಭಿಮಾನಿಗೆ ಆಹ್ವಾನ ನೀಡಿದ್ದೇವೆ. ಇದೊಂದು ಉತ್ತಮವಾದ ಕಾರ್ಯಕ್ರಮ ಆಗಲಿದೆ. ಸಿದ್ದರಾಮಯ್ಯ ನನ್ನನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಈ ಸಮಿತಿ ನ.5ರಂದು ಬೆಳಗಾವಿಗೆ ಭೇಟಿ ನೀಡಲಿದೆ. 2025ರ ಅಕ್ಟೋಬರ್ 2ರವರೆಗೆ ಶತಮಾನೋತ್ಸವ ನಡೆಸಲಾಗುವುದು ಎಂದರು.
ಗಾಳಿಪಟಕ್ಕೆ ಬಳಸುವ 'ಮಾಂಜಾದಾರ'ದ ಕುರಿತು ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಪ್ರಾಣಿಪ್ರಿಯರ ಸಲಹೆಗಳನ್ನು ಸ್ವೀಕರಿಸಿ, ಮಾನವರು, ಪಕ್ಷಿಗಳು ಮತ್ತು ಪರಿಸರಕ್ಕೆ ಹಾನಿಯನ್ನು ತಡೆಯಲು ಗಾಳಿಪಟ ಹಾರಿಸಲು ಬಳಸುವ ಲೋಹ ಅಥವಾ ಗಾಜಿನ ಲೇಪಿತ ದಾರ ಅಥವಾ ಮಾಂಜಾ ದಾರ ಬಳಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಪರಿಸರ (ಸಂರಕ್ಷಣೆ) ಕಾಯಿದೆ (ಇಪಿಎ), 1986ರ ಸೆಕ್ಷನ್ 5ರ ಅಡಿಯಲ್ಲಿ ಸರ್ಕಾರವು ತನ್ನ ಅಧಿಸೂಚನೆಗೆ ತಿದ್ದುಪಡಿಯನ್ನು ತಂದು ಆದೇಶ ಹೊರಡಿಸಿದೆ. ಅದರಂತೆ ಯಾವುದೇ ಚೂಪಾದ, ಲೋಹೀಯ ಅಥವಾ ಗಾಜಿನ ಪುಡಿ, ಅಂಟುಗಳು ಅಥವಾ ಇತರ ಯಾವುದೇ ವಸ್ತುಗಳು ಅಂದರೆ ದಾರವನ್ನು ಬಲಪಡಿಸುವ ಸಾಮಗ್ರಿ ಲೇಪಿತ ಮಾಂಜಾ ದಾರವನ್ನು ಬಳಸುವಂತಿಲ್ಲ ಎಂದು ಪ್ರಕಟಿಸಿದೆ.
Advertisement