ಬಳ್ಳಾರಿ: ಸಂಡೂರು ವ್ಯಾಪ್ತಿಯ ಡಿ.ಬಸಾಪುರ ಗ್ರಾಮದ ಬಳಿ ಇರುವ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳು ಇಲ್ಲದೇ ಸಾಗಿಸಲಾಗುತ್ತಿದ್ದ 27.50 ಲಕ್ಷ ರೂ. ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಂಡೂರು ಉಪಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಿದ್ದು, ಪರಿಶೀಲನೆಯನ್ನು ತೀವ್ರಗೊಳಿಸಿದ್ದಾರೆ.
ಚೆಕ್‌ಪೋಸ್ಟ್ ಮೂಲಕ ಹಾದುಹೋಗುವ ಪ್ರತಿಯೊಂದು ವಾಹನವನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಈ ವೇಳೆ ದಾಖಲೆ ಇಲ್ಲದ ನಗದು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ವಾಹನ ಮಾಲೀಕರನ್ನು ಪ್ರಶ್ನಿಸಿದಾಗ ಸಮಾಧಾನಕರ ಉತ್ತರ ನೀಡಲಿಲ್ಲ. ಇಸಿಐ ಮಾರ್ಗಸೂಚಿಗಳ ಪ್ರಕಾರ ನಾವು ವಶಪಡಿಸಿಕೊಂಡ ಹಣವನ್ನು ಐಟಿ ಇಲಾಖೆಗೆ ಹಸ್ತಾಂತರಿಸಿದ್ದೇವೆ. ಚುನಾವಣಾ ಸಮಯದಲ್ಲಿ ಹೆಚ್ಚಿನ ಮೊತ್ತದ ಹಣವನ್ನು ಸಾಗಿಸುವ ಜನರು ಸೂಕ್ತ ದಾಖಲೆಗಳನ್ನು ಹೊಂದಿರಬೇಕು. ದಾಖಲೆ ಇಲ್ಲದಿದ್ದರೆ ಅವುಗಳನ್ನು ವಶಕ್ಕೆ ಪಡೆದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 13ರಂದು ಉಪಚುನಾವೆ ನಡೆಯಲಿದ್ದು, ಈ ಹಿನ್ನೆಲೆ ಕ್ಷೇತ್ರದಲ್ಲಿ ಭದ್ರತೆ ಹೆಚ್ಚಿಸಿ 10 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ ಎಂದು ಹಿರಿಯ ಜಿಲ್ಲಾಧಿಕಾರಿಯೊಬ್ಬರು ಹೇಳಿದ್ದಾರೆ.
ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಮತದಾರರಿಗೆ ಹಣ, ವಸ್ತು ಹಂಚುವುದು ಅಪರಾಧವಾಗಿದೆ. ಎಂಸಿಸಿಯನ್ನು ಅನುಸರಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಾರ್ವಜನಿಕರು MCC ಯ ಯಾವುದೇ ಉಲ್ಲಂಘನೆಯನ್ನು ಕಂಡಲ್ಲಿ ದೂರುಗಳನ್ನು ಸಲ್ಲಿಸಬೇಕು ಅಥವಾ ದೂರುಗಳನ್ನು ಸಲ್ಲಿಸಲು cVIGIL ಅಪ್ಲಿಕೇಶನ್ ಅನ್ನು ಬಳಸಬೇಕು. ಸಾರ್ವಜನಿಕ ಬೆಂಬಲವಿಲ್ಲದೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Advertisement