ವಿಜಯಪುರ: ಅಂಬೇಡ್ಕರ್ ಸಂವಿಧಾನದಲ್ಲಿ ವಕ್ಪ್ ಕಾಯ್ದೆ ಬಗ್ಗೆ ಉಲ್ಲೇಖವೇ ಇಲ್ಲ. ಆದರೆ 1954-55 ರಲ್ಲಿ ನೆಹರು ಸರ್ಕಾರ ವಕ್ಪ್ ಕಾಯ್ದೆಯನ್ನು ಸಂವಿಧಾನಕ್ಕೆ ಸೇರಿಸಿ, ಅದಕ್ಕೆ ಹೆಚ್ಚಿನ ಅಧಿಕಾರ ನೀಡಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸೋಮವಾರ ಹೇಳಿದರು.
ವಕ್ಫ್ ಆಸ್ತಿ ವಿಚಾರವಾಗಿ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಮಂಡಳಿಯು ಅಸಾಂವಿಧಾನಿಕ ಸಂಸ್ಥೆಯಾಗಿದ್ದು, ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣದ ಭಾಗವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ವಕ್ಫ್ ಕಾಯ್ದೆ ಜಾರಿಗೆ ತಂದು ಅದಕ್ಕೆ ಹೆಚ್ಚಿನ ಅಧಿಕಾರ ನೀಡಿದ್ದರು ಎಂದು ಹೇಳಿದರು.
ಯಾವುದೇ ಜಮೀನು ವಕ್ಪ್ ನದ್ದಾಗುವುದಕ್ಕೆ ಸಾಧ್ಯವಿಲ್ಲ. ಇಲ್ಲಿನ ಮಠಗಳಿಗೆ ಚಾಲುಕ್ಯರು, ಹೊಯ್ಸಳರು, ಕಿತ್ತೂರು ರಾಣಿ ಚೆನ್ನಮ್ಮ ಜಮೀನು ಕೊಟ್ಟದ್ದು. ಆದರೆ, ಇಂತಹವನ್ನೂ ಜಮೀರ್ ಖಾನ್ ವಕ್ಪ್ ಮಾಡಿ ನೋಟಿಸ್ ಕೊಡಿಸಿದ್ದಾರೆ. ಒಂದು ರೀತಿಯಲ್ಲಿ ಮುಸ್ಲಿಮರ ಷರಿಯತ್ ಕಾನೂನನ್ನು ರಾಜ್ಯದಲ್ಲಿ ತರುವುದಕ್ಕೆ ಸಿದ್ದರಾಮಯ್ಯ ಹಾಗೂ ಜಮೀರ್ ಹೊರಟಿದ್ದಾರೆ. ನಾವು ಭಾರತದ ಸಂವಿಧಾನದ ಪ್ರಕಾರ ನಡೆಯುವವರು. ಲೋಕಸಭೆಯಲ್ಲಿ ಸಂವಿಧಾನ ಪ್ರತಿ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕಾರ ಮಾಡುತ್ತೀರಿ. ಇಲ್ಲಿ ಬಂದು ಷರಿಯತ್ ಕಾನೂನು ತರುತ್ತೀರಿ. ಕರ್ನಾಟಕದಲ್ಲಿ ಇದು ನಡೆಯಲ್ಲ. ರಾಜ್ಯದಲ್ಲಿ ಹಲವಾರು ದೇವಸ್ಥಾನಗಳು ವಕ್ಪ್ ಎಂದಾಗಿವೆ. ಇದರ ಹಿಂದೆ ಯಾವ ರೀತಿಯ ಷಡ್ಯಂತ್ರ ಇದೆಯೆಂದು ಅರ್ಥವಾಗುತ್ತದೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಜಮೀರ್ ರಾಜ್ಯದ ಎಲ್ಲ ಭೂಮಿಯನ್ನು ವಕ್ಪ್ ಅಡಿಯಲ್ಲಿ ತರಲು ಹೊರಟಿದ್ದಾರೆ. ಕಾನೂನು ಬಾಹಿರವಾಗಿ ವಕ್ಪ್ ಅದಾಲತ್ ಮಾಡುತ್ತಿದ್ದಾರೆ. ಇವರು ಯಾವ ಕಾನೂನು ಅಡಿ ವಕ್ಫ್ ಅದಾಲತ್ ಮಾಡುತ್ತಿದ್ದಾರೆ ಎಂದು ತಿಳಿಸಬೇಕಿದೆ. ರೈತರಿಗೆ ನೀಡಿದ್ದ ನೋಟಿಸ್ ರದ್ದು ಮಾಡಬೇಕು, ಪಹಣಿಯಲ್ಲಿ ನಮೂದಾಗಿರುವ ವಕ್ಪ್ ಬೋರ್ಡ್ ಹೆಸರು ತೆಗೆಯಬೇಕು ಎಂದು ಆಗ್ರಹಿಸಿದರು,
ಇದೇ ವೇಳೆ ಉಡುಪಿಯ ಕೃಷ್ಣ ಮಠದ ಮುಂಭಾಗದಿಂದ ಶಿವಳ್ಳಿ ಎಂಬ ಗ್ರಾಮದ ವರೆಗೆ ಸುಲ್ತಾನಪುರ ಎಂದು ದಿಶಾಂಕ ಆ್ಯಪ್ ನಲ್ಲಿ ತೋರಿಸುತ್ತಿರುವ ವಿಚಾರ ಕುರಿತು ಮಾತನಾಡಿ, ಇದರಿಂದ ಆತಂಕದ ವಾತಾವರಣ ಮನೆ ಮಾಡಿದೆ ಎಂದರು.
ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕಗಳು ವಕ್ಪ್ ಅಡಿಯಲ್ಲಿವೆ. ಇದು ಬದಲಾವಣೆ ಆಗಬೇಕು. ವಿಜಯಪುರದ ಡಿಸಿ, ಎಸ್ಪಿ ಕಚೇರಿ, ಜಿಲ್ಲಾಸ್ಪತ್ರೆ ಹಾಗೂ ಇತರೇ ದೇವಸ್ಥಾನಗಳು ಕೂಡ ವಕ್ಪ್ ಭೂಮಿ ಎಂದಾಗಿವೆ. ದಾನದ ಮೂಲಕ ವಕ್ಪ್ ಗೆ ಬರಬೇಕು, ಆದರೆ, ಇವೆಲ್ಲಾ ಹೇಗೆ ವಕ್ಪ್ ಎಂದಾದವು. 1974 ರ ಗೆಜೆಟ್ ನೊಟಿಫಿಕೇಷನ್ ಸಂಪೂರ್ಣ ರದ್ದಾಗಬೇಕು. ಇದು ರದ್ದಾಗೋ ವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಡೆದ ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ವಕ್ಫ್ ಬೋರ್ಡ್ ಹೆಸರಿನಲ್ಲಿ ಮುಸ್ಲಿಮರಿಗೆ ಸಹಾಯ ಮಾಡಲು ಪ್ರತ್ಯೇಕ ಕಾನೂನು ಮಾಡಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
Advertisement