ಬೆಂಗಳೂರು: ನೆಲಮಂಗಲದಿಂದ ದಾಸನಪುರಕ್ಕೆ ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿದ್ದಾಗ 40 ವರ್ಷದ ಬಸ್ ಚಾಲಕ ಕಿರಣ್ ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಸ್ ನೆಲಮಂಗಲದಿಂದ ದಾಸನಪುರಕ್ಕೆ ತೆರಳುತ್ತಿದ್ದಾಗ ಬೆಳಗ್ಗೆ 11 ಗಂಟೆಗೆ ಈ ಘಟನೆ ಸಂಭವಿಸಿದೆ.
ಹೃದಯಾಘಾತದಿಂದ ಚಾಲಕ ಮಾರ್ಗ ಮಧ್ಯೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಕಂಡೆಕ್ಟರ್ ಸಮಯಪ್ರಜ್ಞೆಯಿಂದ ಬಸ್ ಅಪಘಾತಕ್ಕೀಡಾಗುವುದರಿಂದ ತಡೆದಿದ್ದಾರೆ. ಕಿರಣ್ ಕುಮಾರ್ ಅವರು ಕುಸಿದು ಬಿದ್ದಾಗ ಬಸ್ಸು ಬಸ್ಸು ಮತ್ತೊಂದು BMTC ಬಸ್ ಅನ್ನು ಹಿಂದಿಕ್ಕಿ ಮುಂದೆ ಹೋಗಿದ್ದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಈ ವೇಳೆ ಕಂಡೆಕ್ಟರ್ ಓಬಳೇಶ್ ಅವರು ಧೈರ್ಯದಿಂದ ಮುಂದೆ ಹೋಗಿ ಕಿರಣ್ ಕುಮಾರ್ ಅವರನ್ನು ಸೀಟಿನಿಂದ ಪಕ್ಕಕ್ಕೆ ಎಳೆದು ಕೂರಿಸಿ ನಂತರ ಬಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬಸ್ ನಿಲ್ಲಿಸಿದರು. ಹೀಗಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ನಿಟ್ಟಿಸಿರು ಬಿಡುವಂತಾಯಿತು.
ನಂತರ ಓಬಳೇಶ್ ಅವರು ಕುಮಾರ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಪರೀಕ್ಷಿಸಿದ ನಂತರ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಘೋಷಿಸಿದರು.
ಹಠಾತ್ ಹೃದಯಾಘಾತದಿಂದ ಡಿಪೋ 40ರ ಚಾಲಕ ಕಿರಣ್ ಕುಮಾರ್ ಮೃತಪಟ್ಟಿದ್ದು ಅವರ ಅಕಾಲಿಕ ನಿಧನಕ್ಕೆ ಬಿಎಂಟಿಸಿ ದುಃಖ ವ್ಯಕ್ತಪಡಿಸಿದ್ದು ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಿಗಮವು ಪ್ರಾರ್ಥಿಸುತ್ತದೆ. ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಕುಟುಂಬವನ್ನು ಭೇಟಿ ಮಾಡಿ, ಅವರಿಗೆ ಸಂತಾಪ ಸೂಚಿಸಿದರು. ಅಲ್ಲದೆ ಅಂತಿಮ ವಿಧಿವಿಧಾನಗಳಿಗೆ ಸಹಾಯಧನವನ್ನು ನೀಡಿದರು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement