ಮೈಸೂರು: ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ವೇದಿಕೆಯಲ್ಲೇ ಮುಜುಗುರದ ಸನ್ನಿವೇಶ ಎದುರಾಗಿದ್ದು, ವ್ಯಕ್ತಿಯೋರ್ವ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಮೈಸೂರಿನಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಸಭಾಂಗಣದಲ್ಲಿ ಇಂದು ನಡೆಯುತ್ತಿದ್ದ ''ಮೈಸೂರು ಸಂಗೀತ ಸುಗಂಧ ಉತ್ಸವ'' ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪಾಲ್ಗೊಂಡಿದ್ದರು.
ಈ ವೇಳೆ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣವನ್ನು ಮುಗಿಸಿದ ಕೂಡಲೇ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ದಿಢೀರ್ ಮೇಲೆದ್ದು ಘೋಷಣೆಗಳನ್ನು ಕೂಗಲಾರಂಭಿಸಿದ.
ಕಾರ್ಯಕ್ರಮದ ನಡುವೆ ''ಯಾವುದೇ ಕಾರಣಕ್ಕೂ ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಬೇಡಿ'' ಎಂದು ವೇದಿಕೆ ಮುಂಭಾಗದಲ್ಲಿ ಎದ್ದು ನಿಂತು ಅಡಚಣೆ ಉಂಟು ಮಾಡಿದರು. ವೇದಿಕೆಯ ಬಳಿಗೆ ಬಂದ ಆ ವ್ಯಕ್ತಿ ಸರ್ಕಾರದ ವಿರುದ್ಧ ತಮ್ಮ ವೇದನೆಯನ್ನು ಹೊರಹಾಕಿದರು. ಕನ್ನಡ ಮತ್ತು ಹಿಂದಿಯಲ್ಲಿ ಮಾತನಾಡಿದ ಈ ವ್ಯಕ್ತಿ, ಕರ್ನಾಟಕದಲ್ಲಿ ಲೂಟಿ ಮಾಡುತ್ತಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೂಗಿದರು. ಇದು ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲ ವಾತಾವರಣ ನಿರ್ಮಿಸಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಕಾರ್ಯಕ್ರಮದ ಆಯೋಜಕರು ಮತ್ತು ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದರು.
ಈ ವೇಳೆ ಕೇಂದ್ರ ಸಚಿವರು ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿದರೂ ಕಾರ್ಯಪ್ರವೃತ್ತರಾದ ಜಯಲಕ್ಷ್ಮೀಪುರಂ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಈ ವ್ಯಕ್ತಿಯನ್ನು ಮೈಸೂರಿನ ಕೆ.ಆರ್. ನಗರ ತಾಲ್ಲೂಕಿನ ಸುಗ್ಗನಹಳ್ಳಿಯ ಹೊಟೇಲ್ ಕಾರ್ಮಿಕ ರವಿ ಎಂದು ಗುರುತಿಸಲಾಗಿದೆ.
ರೈತರ ಪರವಾಗಿ ಕೇಂದ್ರ ಸಚಿವರಿಗೆ ಮನವಿ:
ಇನ್ನು ಕಾರ್ಯಕ್ರಮ ಮುಕ್ತಾಯದ ಬಳಿಕ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ರೈತರ ಪರವಾಗಿ ಮನವಿ ಪತ್ರ ಸಲ್ಲಿಸಿದರು. ಕೃಷಿ ಸಾಲಕ್ಕೆ ರೈತರ ಸಿಬಿಲ್ ಸ್ಕೋರ್ ಪರಿಗಣಿಸುವ ನಿಯಮ ರದ್ದು, ಕೃಷಿ ಉತ್ಪನ್ನ ಮೇಲಿನ ಜಿಎಸ್ಟಿ ತೆರಿಗೆ ರದ್ದು, ರೈತ ಉತ್ಪಾದಕ ಸಂಸ್ಥೆಗಳ ವರಮಾನ ತೆರಿಗೆ ಹಾಗೂ ಎಂಐಟಿ ತೆರಿಗೆ ಕಾನೂನು ರದ್ದು ಮಾಡುವಂತೆ ಶಾಂತಕುಮಾರ್ ಅವರು ಮನವಿ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ಸಚಿವರು, ಕೃಷಿ ಚಟುವಟಿಕೆ ಮಾಡುವ ರೈತರಿಗೆ ಯಾವುದೇ ತೆರಿಗೆ ವಿಧಿಸಿಲ್ಲ. ಜಿಎಸ್ಟಿ ಬಗ್ಗೆ ನಿಮ್ಮ ರಾಜ್ಯದ ಸಚಿವರು ಮಂಡಳಿ ಸಭೆಯಲ್ಲಿ ಚರ್ಚೆ ಮಾಡಲು ಅವಕಾಶವಿದೆ. ರೈತರ ಉತ್ಪಾದಕ ಸಂಸ್ಥೆಗಳಿಗೆ ಎಂಎಟಿ ತೆರಿಗೆ ಕೂಡ ಇರುವುದಿಲ್ಲ. ಇಲಾಖೆ ವತಿಯಿಂದ ನೋಟಿಸ್ ಬಂದಿದ್ದರೆ ದಾಖಲಾತಿ ಕೊಡಿ ಎಂದರು.
Advertisement