ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿಯನ್ನು ನಾಲ್ವರು ಸುಪಾರಿ ಕಿಲ್ಲರ್‌ಗಳು ಕಿಡ್ನಾಪ್ ಮಾಡಿ, ಆಕೆಯ ಮೇಲೆ ಹಲ್ಲೆ ನಡೆಸಿ, ಆಕೆ ಸತ್ತಿದ್ದಾಳೆಂದು ನಂಬಿ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಅಕ್ಟೋಬರ್ 24ರಂದು ಘಟನೆ ನಡೆದಿದ್ದರೂ ಆರೋಪಿಗಳ ಬಂಧನದಿಂದ ಗುರುವಾರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಆಕೆಯ ಮೇಲೆ ಹಲ್ಲೆ ಮಾಡಿದ ನಂತರ ಪ್ರಜ್ಞಾಹೀನಳಾದ ಶಿಕ್ಷಕಿ, ಸತ್ತಂತೆ ನಟಿಸಿದ್ದಾರೆ. ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಆಕೆಗೆ ಯೋಗ ಸಹಾಯ ಮಾಡಿದೆ, ಆರೋಪಿಗಳು ಹಲ್ಲೆ ನಡೆಸಿದಾಗ ಸತ್ತಂತೆ ನಟಿಸಲು ಆಕೆ ಉಸಿರು ಹಿಡಿದಿಡಲು ಯೋಗಾಸನ ಸಹಾಯ ಮಾಡಿದೆ. ಆರೋಪಿಗಳು ಸ್ಥಳದಿಂದ ಹೋದ ನಂತರ, ಎದ್ದು ಬಂದ ಆಕೆ ದಿಬ್ಬೂರಹಳ್ಳಿಯ ಕೆಲವರ ಸಹಾಯದಿಂದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹೇಳಿದ್ದಾರೆ. ಯೋಗ ಶಿಕ್ಷಕಿ ಅರ್ಚನಾ (35)ಗೆ ಪತಿಯ ಜೊತೆ ಉತ್ತಮ ಸಂಬಂಧವಿರಲಿಲ್ಲ, ಬೆಂಗಳೂರಿನ ಕೃಷ್ಣರಾಜಪುರಂ ಮೂಲದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಅರ್ಚನಾ ತನ್ನ ಪತಿಯ ಸ್ನೇಹಿತ ಕೃಷ್ಣರಾಜಪುರಂನ ಸಂತೋಷ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಕುಶಾಲ್ ಹೇಳಿದ್ದಾರೆ. ಸಂತೋಷ್ ಪತ್ನಿ ಬಿಂದು ಅರ್ಚನಾ ಜತೆಗಿನ ಸಂಬಂಧದ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದಳು. ಹೀಗಾಗಿ ಅರ್ಚನಾಳನ್ನು ಕೊಲ್ಲಲು ಬಿಂದು ಪ್ಲಾನ್ ರೂಪಿಸಿದ್ದಳು. ಕೆಲವು ಕ್ರಿಮಿನಲ್ ಪ್ರಕರಣಗಳಿರುವ ಸತೀಶ್ ರೆಡ್ಡಿಯನ್ನು ಸಂಪರ್ಕಿಸಿದ ಬಿಂದು ಅರ್ಚನಾಳನ್ನು ಕೊಲ್ಲಲು ಸುಪಾರಿ ಕೊಟ್ಟಳು. ಆತನ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದಲ್ಲದೆ, ‘ಸುಪಾರಿ’ ಭಾಗವಾಗಿ ಅವನಿಗೆ ಸ್ವಲ್ಪ ಹಣವನ್ನು ಕೊಟ್ಟಿದ್ದಳು.
ಪ್ಲಾನ್ ಪ್ರಕಾರ ಸತೀಶ್ ರೆಡ್ಡಿ ಕೃಷ್ಣರಾಜಪುರಂನಲ್ಲಿ ಅರ್ಚನಾ ಭೇಟಿಯಾಗಿ ಯೋಗ ಕಲಿಯುವ ಆಸೆ ತಿಳಿಸಿದ್ದಾನೆ. ಕೆಲವು ದಿನಗಳ ನಂತರ ರೆಡ್ಡಿ ತನ್ನ ಕಾರಿನಲ್ಲಿ ಆಕೆಯನ್ನು ನಗರದ ಬಾಗಲೂರಿಗೆ ಕರೆದೊಯ್ದು ಇತರ ಮೂವರ ಜೊತೆ ಸೇರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದ ಅರ್ಚನಾ ಸತ್ತಂತೆ ನಟಿಸಿದ್ದಾಳೆ.
ಆಕೆಗೆ ಆದ ಗಾಯಗಳಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ನಂಬಿದ ರೆಡ್ಡಿ ಮತ್ತು ಆತನ ಸ್ನೇಹಿತರು ಆಕೆ ಧರಿಸಿದ್ದ ಆಭರಣಗಳನ್ನು ತೆಗೆದು ದಿಬ್ಬೂರು ಅರಣ್ಯದಲ್ಲಿ ಎಸೆದಿದ್ದಾರೆ. ಪೊಲೀಸರು ರೆಡ್ಡಿಯನ್ನು ಬಂಧಿಸಿದ್ದು, ಆತನಿಂದ ಮಾಹಿತಿ ಪಡೆದು ಬಿಂದು, ನಾಗೇಂದ್ರ ರೆಡ್ಡಿ, ರಮಣ ರೆಡ್ಡಿ ಮತ್ತು ರವಿಯನ್ನು ಬಂಧಿಸಿದ್ದಾರೆ. ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ತನಿಖೆ ವೇಳೆ ಅಪರಾಧ ಕೃತ್ಯಕ್ಕೆ ಬಳಸಿದ್ದ ಕಾರನ್ನು ಕೊಪ್ಪಳದಿಂದ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
Advertisement