ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆಗೆ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರಿಗೆ 6 ತಿಂಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಕೆಕೆಆರ್‌ಡಿಬಿ ಮತ್ತು ಕಲ್ಯಾಣ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಅಕ್ರಮಗಳು ನಡೆದಿದೆ ಎಂದು ಬಂದಿದ್ದ ದೂರಿನ ಕುರಿತು ವಿಚಾರಣೆ ನಡೆಸಿದ್ದ, ಅಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಇ.ವಿ. ರಮಣ ರೆಡ್ಡಿ (ಈಗ ನಿವೃತ್ತ) ಅವರು ವರದಿ ನೀಡಿದ್ದರು. ಆ ವರದಿ ಪರಿಶೀಲಿಸಿ, ಹೆಚ್ಚಿನ ತನಿಖೆ ನಡೆಸಲು ಸುಧೀರ್ ಕುಮಾರ್ ಅವರನ್ನು ನೇಮಿಸಲಾಗಿದೆ.
ಸರ್ಕಾರದ ಅನುಮೋದನೆ ಇಲ್ಲದೆ ಕೊರೋನಾದಿಂದ ಮೃತ ಖಾಸಗಿ ಶಿಕ್ಷಕರಿಗೆ 50 ಸಾವಿರ ರೂ. ಪರಿಹಾರ ನೀಡಲಾಗಿತ್ತು. ಲೋಕೋಪಯೋಗಿ ಬಾಡಿಗೆ ಕಟ್ಟಡಗಳಿಗೆ ನಿಯಮ ಬಾಹಿರವಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಸರ್ಕಾರ ರೂ.45 ಕೋಟಿಯಲ್ಲಿ 315 ಹೊಸ ಬಸ್ ಖರೀದಿಸಲು ಅನುಮೋದನೆ ನೀಡಿದ್ದರೂ ಆ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿರುವುದು, 47 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರೂ 37 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಡಳಿಯು ಮಂಜೂರಾತಿ ನೀಡಿರುವುದು, 815 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದರೂ ಅನುಷ್ಠಾನಗೊಳಿಸದಿರುವುದೂ ಸೇರಿದಂತೆ ಒಟ್ಟು ಎಂಟು ಆರೋಪಗಳನ್ನು ಮಾಡಲಾಗಿತ್ತು.
ನಿಯಮ ಉಲ್ಲಂಘಿಸಿ ಅನುದಾನ ಮಂಜೂರು ಮತ್ತು ದುರ್ಬಳಕೆಯ ಆರೋಪಗಳನ್ನು ಸಂಘದ ಮೇಲೆ ಮಾಡಲಾಗಿತ್ತು. ಈ ಆರೋಪಗಳ ಕುರಿತು ರಮಣ ರೆಡ್ಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಬಹಳ ದಿನಗಳಿಂದ ಯಾವುದೇ ಕ್ರಮ ಕೈಗೊಳ್ಳದ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಸಚಿವ ಮನವಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಇಲಾಖಾ ತನಿಖೆ ನಡೆಸಲು ಆದೇಶ ಹೊರಡಿಸಿದ್ದರು. ಇದೀಗ ಸುಧೀರ್ ಕುಮಾರ್ ಅವರನ್ನು ವಿಚಾರಣಾ ಅಧಿಕಾರಿಯನ್ನಾಗಿ ನೇಮಿಸಿದೆ.
Advertisement