ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ರಾಜಕೀಯ ಪಕ್ಷಗಳು ಅಬ್ಬರ ಪ್ರಚಾರ ನಡೆಸಿದ್ದು, ಪ್ರಚಾರದ ವೇಳೆ ವೇಳೆ ಹಿಂದೆಂದೂ ಕಾಣದ ರೀತಿಯಲ್ಲಿ ಹಣದ ಹೊಳೆಯೇ ಹರಿದಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಏಜೆಂಟರುಗಳ ಮೂಲಕ ಮತದಾರರಿಗೆ ಭಾರೀ ಮೊತ್ತದ ಹಣವನ್ನು ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಚುನಾವಣೆಯಲ್ಲಿ ಪ್ರತಿ ಮತಕ್ಕೆ ರೂ.500ರಿಂದ ರೂ.3000 ನೀಡಿದ್ದ ರಾಜಕೀಯ ಪಕ್ಷಗಳು ಈ ಬಾರಿ ರೂ.3000 ರಿಂದ 6,000 ರೂಗಳನ್ನು ನೀಡಿದೆ ಎಂದೂ ಮೂಲಗಳು ಮಾಹಿತಿ ಲಭ್ಯವಾಗಿವೆ.
ಕೇವಲ ಮತದಾರರಿಗಷ್ಟೇ ಅಲ್ಲದೆ, ಬೀದಿ ಮತ್ತು ಮೊಹಲ್ಲಾ ಮಟ್ಟದ ಪ್ರಭಾವಿ ನಾಯಕರಿಗೂ ಮತದಾರರನ್ನು ಒಗ್ಗೂಡಿಸರು ರೂ.30-40 ಸಾವಿರ ಹಣ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಮೀನಾ ಮಾತನಾಡಿ, ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ತಪಾಸಣೆಗಳನ್ನು ನಡೆಸುತ್ತಿದ್ದಾರೆ. ನಮ್ಮ ತಂಡಗಳು ಅಲರ್ಟ್ ಆಗಿದ್ದು, ಒಂಬತ್ತು ಸ್ಟ್ಯಾಟಿಕ್ ತಂಡಗಳು ಮತ್ತು ಒಂಬತ್ತು ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ತಪಾಸಣೆಯ ಹೊರತಾಗಿಯು ಹಣದ ಆಮಿಷಗಳು ಬರುತ್ತಿದ್ದರೆ, ಜನರು ನೇರವಾಗಿ ಚುನಾವಣಾ ಆಯೋಗಕ್ಕೆ ಅಥವಾ ವಿಜಿಲ್ ಆ್ಯಪ್ ಮೂಲಕ ದೂರು ನೀಡಬಹುದು ಎಂದು ತಿಳಿಸಿದ್ದಾರೆ. ಆದರೆ, ಚುನಾವಣಾ ಆಯೋಗಕ್ಕೆ ಈ ವರೆಗೂ ಯಾವುದೇ ದೂರುಗಳು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಐಎಎಸ್ ಮಾಜಿ ಅಧಿಕಾರಿ ಎಂ.ಜಿ.ದೇವಸಹಾಯಂ ಅವರು ಮಾತನಾಡಿ. ಚುನಾವಣಾ ಸಮಯದಲ್ಲಿ ಭ್ರಷ್ಟಾಚಾರ ಮತ್ತು ಆಮಿಷಗಳನ್ನು ದೂರಾಗಿಸಲು ಚುನಾವಣಾ ಆಯೋಗ ಅಸ್ತಿತ್ವದಲ್ಲಿದೆ, ಆದರೆ, ಆಯೋಗ ವಾಸ್ತವವಾಗಿ ಏನೂ ಮಾಡುತ್ತಿಲ್ಲ ಎಂಬುದು ವಿಷಾದನೀಯ ಸಂಗತಿ ಎಂದು ಹೇಳಿದ್ದಾರೆ.
Advertisement