ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ರಾಜ್ಯದ ವಿವಿಧೆಡೆ ಹನ್ನೊಂದು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬೆಳಗಾವಿ, ಹಾವೇರಿ, ದಾವಣಗೆರೆ, ಕಲಬುರಗಿ, ಮೈಸೂರು, ರಾಮನಗರ ಮತ್ತು ಧಾರವಾಡ ಸೇರಿದಂತೆ ಹಲವೆಡೆ ಅಧಿಕಾರಿಗಳಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಬೆಳಗ್ಗೆಯಿಂದ ದಾಳಿ ಆರಂಭಗೊಂಡಿದ್ದು, ದಾಖಲೆಗಳು, ಆಸ್ತಿ, ಬೆಲೆಬಾಳುವ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾವಣಗೆರೆಯಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲ್ ರಾಜ್ ಮನೆ ಮೇಲೆ ದಾಳಿ ವೇಳೆಯಲ್ಲಿ ರೂ. 1 ಲಕ್ಷ ನಗದು, ಇನ್ನೋವಾ ಕಾರು ಹಾಗೂ ಆಸ್ತಿಯ ದಾಖಲೆ ಪತ್ತೆಯಾಗಿವೆ. ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಗೊಂಡಿದ್ದ ಕಮಲ್ ರಾಜ್ ಹಲವು ಬಡ್ತಿ ಪಡೆದು ಸಹಾಯಕ ನಿರ್ದೇಶಕರಾಗಿದ್ದರು. ಚಿತ್ರದುರ್ಗ ಹಾಗೂ ದಾವಣೆಗೆರೆಯಲ್ಲಿ ಮನೆ, ಮೂರು ನಿವೇಶನ ಸೇರಿ ಇತರೆ ಆಸ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧಾರವಾಡದ ಕೆಐಎಡಿಬಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದಪ್ಪ ಭಜಂತ್ರಿ ಅವರ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿರುವ ವೆಂಕಟೇಶ್ ಎಂಬುವರ ಬೆಳಗಾವಿ ನಿವಾಸದ ಮೇಲೂ ದಾಳಿ ನಡೆದಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ವೆಂಕಟೇಶ್ ಅವರು ಈ ಹಿಂದೆ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರ ರೊಟ್ಟಿ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರ ರೇಡ್ ನಡೆದಿದೆ. ಬೀದರ್, ಬೆಂಗಳೂರು ನಿವಾಸ, ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ದಾಖಲೆ ಹಾಗೂ ಇನ್ನಿತರ ಮಾಹಿತಿ ಕಲೆಹಾಕಲಾಗಿದೆ.
ಹಾವೇರಿಯ ಬಸವೇಶ್ವರ ನಗರದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಉಪವಿಭಾಗದ ಎಇ ಕಾಶೀನಾಥ್ ಭಜಂತ್ರಿ ಮನೆ ಮೇಲೆ ದಾಳಿ ನಡೆದಿದ್ದು, 14 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.ಬೆಳಗ್ಗೆ ಮನೆಯಲ್ಲಿ ಮಲಗಿದ್ದ ಭಜಂತ್ರಿ, ಲೋಕಾಯುಕ್ತ ಅಧಿಕಾರಿಗಳ ದಾಳಿ ಸುಳಿವು ಸಿಗುತ್ತಿದ್ದಂತೆಯೇ ಸುಮಾರು 9 ಲಕ್ಷ ರೂ. ಹಣದ ಗಂಟನ್ನು ಕಿಟಿಕಿಯಿಂದ ಆಚೆ ಎಸೆದಿದ್ದಾರೆ. ಆದರೆ, ತಕ್ಷಣ ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಅದನ್ನೂ ವಶಪಡಿಸಿಕೊಂಡಿದ್ದಾರೆ.
ರಾಣೆಬೆನ್ನೂರು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿರುವ ಜ್ಯೋತಿ ಶಿಗ್ಲಿ ಅವರ ಮನೆ ಮೇಲೂ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.
Advertisement