ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಉಪ ಚುನಾವಣೆ ನಡೆಯುತ್ತಿದ್ದು, ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ. 61 ರಷ್ಟು ಮತದಾನವಾಗಿದೆ.
ಹೈವೋಲ್ಟೇಜ್ ಕ್ಷೇತ್ರ ಚನ್ನಪಟ್ಟಣದಲ್ಲಿ ಅತಿ ಹೆಚ್ಚು ಮತದಾನ
ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಬೊಂಬೆ ನಾಡು ಚನ್ನಪಟ್ಟಣದಲ್ಲಿ ಮಧ್ಯಾಹ್ನ ಮೂರು ಗಂಟೆಯವರೆಗೆ ಶೇ. 67.63 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು 157541 ಮತಗಳು ಚಲಾವಣೆಯಾಗಿದ್ದು, ಈ ಪೈಕಿ 72067 ಪುರುಷರು ಹಾಗೂ 85473 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇನ್ನು ಸಂಡೂರಿನಲ್ಲಿ ಶೇ.58.27 ರಷ್ಟು ಹಾಗೂ ಶಿಗ್ಗಾಂವಿಯಲ್ಲಿ ಶೇ.59.62ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.