ನಾಗೇಂದ್ರಗೆ ಸಚಿವ ಸ್ಥಾನ ನೀಡುವ ಬಗ್ಗೆಯಷ್ಟೇ ಚರ್ಚೆ, ಸಚಿವ ಸಂಪುಟ ಪುನಾರಚನೆ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಜಮೀರ್ ಮತ್ತು ಕುಮಾರಸ್ವಾಮಿ ಸ್ನೇಹಿತರು. ಅವರವರ ನಡುವೆ ಏನೇನೋ ನಡೆಯುತ್ತಿರುತ್ತದೆ. ಆ ವಿಚಾರವಾಗಿ ಜಮೀರ್ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದೆಲ್ಲವೂ ಉಪಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ‌.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಕುರಿತಂತೆ ಚರ್ಚೆಗಳಾಗಿದ್ದು, ಸಚಿವ ಸಂಪುಟ ಪುನರಾಚನೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಅನೇಕರು ಕೇಳಿದ್ದಾರೆ. ಉಪಚುನಾವಣೆ ಬಳಿಕ ನೋಡೋಣ ಎಂದಿದ್ದೇನೆ. ಅದನ್ನೇ ಸಂಪುಟ ಪುನಾರಚನೆ ಎಂದು ಬಿಂಬಿಸಬೇಡಿ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿಯವರು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿಯೂ ಅದನ್ನೇ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್-19 ವೇಳೆ ನಡೆದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆಂದು ಪ್ರಶ್ನಿಸಿದರು.

ಪ್ರಧಾನಿ ಮೋದಿಗೆ ಕರ್ನಾಟಕ ಮತ್ತು ಸಿದ್ದರಾಮಯ್ಯ ಟಾರ್ಗೆಟ್. ಕರ್ನಾಟಕ ಅತಿ ದೊಡ್ಡ ರಾಜ್ಯ. ಇಲ್ಲಿ ನಾವು 136 ಸ್ಥಾನ ಗೆದ್ದಿದ್ದೇವೆ‌. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ. ಭ್ರಷ್ಟಾಚಾರ ನಡೆಯುವುದಕ್ಕೂ ಬಿಡುವುದಿಲ್ಲ ಎಂದರು.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದ್ದು ಸಾಬೀತಾದರೆ ರಾಜಕೀಯವನ್ನೇ ಬಿಡುತ್ತೇನೆ. ಒಂದೇ ಒಂದು ಪೈಸೆ ಭ್ರಷ್ಟಾಚಾರ ಮಾಡಿದ್ದರೆ ರಾಜಕೀಯ ಬಿಡುತ್ತೇನೆ. ಮೋದಿ ಪ್ರಧಾನಿ ಸ್ಥಾನ ತ್ಯಜಿಸುತ್ತಾರಾ ಕೇಳಿ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ
ಬಿ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ: ಸಿಎಂ ಸಿದ್ದರಾಮಯ್ಯ ಸುಳಿವು

ಇದೇ ವೇಳೆ ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅವರು ಕರಿಯ ಎಂದು ಕರೆದಿರುವುದನ್ನು ಸಮರ್ಥಿಸಿಕೊಂಡ ಸಿಎಂ, ದೇವೇಗೌಡರು ಸಿದ್ದರಾಮಯ್ಯ ಸೊಕ್ಕು ಮುರಿಯುತ್ತೇನೆ; ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದು ಸರಿನಾ? ಎಂದು ಪ್ರಶ್ನಿಸಿದರು.

ಜಮೀರ್ ಮತ್ತು ಕುಮಾರಸ್ವಾಮಿ ಸ್ನೇಹಿತರು. ಅವರವರ ನಡುವೆ ಏನೇನೋ ನಡೆಯುತ್ತಿರುತ್ತದೆ. ಆ ವಿಚಾರವಾಗಿ ಜಮೀರ್ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದೆಲ್ಲವೂ ಉಪಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ‌ ಎಂದು ತಿಳಿಸಿದರು.

ನಾಗರೀಕ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಕೊಡುವ ವಿಚಾರ‌ ಕುರಿತ ಪ್ರಶ್ನೆಗೆ ಉತ್ತರಿಸಿ, ಆ ಬಗ್ಗೆ ಕೆಲವರು ಕೇಳಿದ್ದಾರೆ, ಮನವಿಯನ್ನೂ ಕೊಟ್ಟಿದ್ದಾರೆ. ಆದರೆ, ಈ ಬಗ್ಗೆ ಯಾವ ಚಿಂತನೆಯೂ ನಡೆದಿಲ್ಲ. ಬಿಜೆಪಿಯವರು ಸುಮ್ಮನೆ ಕೋಮುವಾದದ ಕಾರಣದಿಂದ ವಿವಾದ ಮಾಡುತ್ತಿದೆ. ಅವರಿಗೆ ಶಾಂತಿ, ಸೌಹಾರ್ದ ಕಡೆಸುವುದೇ ಕೆಲಸ. ಹೀಗಾಗಿ ಇದು ವಿವಾದವಾಗುತ್ತಿದೆ ಅಷ್ಟೇ ಎಂದರು.

ಇಡಿ ತನಿಖೆ ಕುರಿತು ಮಾತನಾಡಿ. ಇ.ಡಿ.ಯವರು ಅವರ ಕೆಲಸ ಮಾಡುತ್ತಿದ್ದಾರೆ. ನಾನು ಆ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಅವರು ಯಾರನ್ನಾದರೂ ಕರೆಸಲಿ, ವಿಚಾರಣೆ ನಡೆಸಲಿ; ಅದು ಅವರ ತನಿಖಾ ಕ್ರಮ. ಇ.ಡಿ. ಲೋಕಾಯುಕ್ತದ ತನಿಖೆಗಳು ಸುಳ್ಳು ಕೇಸಿನ‌ ಮೇಲೆ ನಡೆಯುತ್ತಿವೆ. ಅದರ ಬಗ್ಗೆ ನಾನೇಕೆ ಪ್ರತಿಕ್ರಿಯೆ ಕೊಡಲಿ ಎಂದು ಹೇಳಿದರು.

ಬಂಡೀಪುರದಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧ ತೆಗೆಯುವ ವಿಚಾರ ಕುರಿತು ಮಾತನಾಡಿ, ಈ ವಿಚಾರವಾಗಿ ಪ್ರಸ್ತಾವವಿಲ್ಲ. ಮಾತುಕತೆಯೂ ಆಗಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಯಾವ ಅರ್ಥದಲ್ಲಿ ಆ ಬಗ್ಗೆ ಹೇಳಿಕೆ ನೀಡಿದ್ದಾರೆಯೋ ಗೊತ್ತಿಲ್ಲ, ಹೆಚ್ಚಿನ ಮಾಹಿತಿ ಅವರನ್ನೇ ಕೇಳಿ ಎಂದರು.

ಈ ನಡುವೆ ಮಾಧ್ಯಮದವರೊಂದಿಗೆ ಗದ್ದಮ ಮಾಡಿದವರ ಮೇಲೆ ಕೋಪಗೊಂಡ ಮುಖ್ಯಮಂತ್ರಿಗಳು ಜೋರು ಧ್ವನಿಯಲ್ಲಿ ಗದರಿ, ನಾಲಿಗೆ ಕಚ್ಚಿ ಕೈಎತ್ತಿ ಹೊಡೆಯಲು ಮುಂದಾಗಿದ್ದು ಕಂಡು ಬಂದಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com