ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಕೋವಿಡ್ ಹಗರಣದ ತನಿಖೆಗೆ SIT ರಚನೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್, ಕೋವಿಡ್ ಹಗರಣ ಸಂಬಂಧ ರಾಜ್ಯ ಸರ್ಕಾರ ನೇಮಿಸಿದ್ದ ನ್ಯಾ. ಮೈಕಲ್ ಡಿ ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿ ನೀಡಿದ್ದು, ಕೊವಿಡ್ ವೇಳೆ ಕಿಟ್, ಔಷಧಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬುದು ವ್ಯಕ್ತವಾಗಿದೆ. ಕೊವಿಡ್ ಹಗರಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ಈ ಕುರಿತು ಸಮಗ್ರ ತನಿಖೆಗೆ ಎಸ್ಐಟಿ ರಚನೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಕರಣ ಸಂಬಂಧ ಚಾರ್ಜ್ ಶೀಟ್ ಕೂಡ ಹಾಕುತ್ತೇವೆ. ಯಾರ ವಿರುದ್ಧ FIR ದಾಖಲಿಸಬೇಕೆಂದು SIT ನಿರ್ಧರಿಸುತ್ತೆ ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು 50 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ ಆಮಿಷ ನೀಡಲಾಗಿದೆ ಎಂಬ ಸಿಎಂ ಸಿದ್ದರಾಮಯ್ಯ ನಿನ್ನೆ ಗಂಭೀರ ಆರೋಪ ಮಾಡಿದ್ದರು. ನಮ್ಮ ಗ್ಯಾರಂಟಿ ಯೋಜನೆಗಳು ಬಿಜೆಪಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ. ಹೇಗಾದರೂ ಮಾಡಿ ತನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ, ನಿಮ್ಮದೇ ತನಿಖಾ ಸಂಸ್ಥೆಗಳಿವೆ, 50 ಕೋಟಿ ರೂ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸುವುದು ನಿಮ್ಮ ನೈತಿಕ ಜವಾಬ್ದಾರಿ ಎಂದು ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಾಂಗ್ ನೀಡಿದರು.
ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ಮರಿಗೌಡ ಇಂದು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಶಾಂತಿನಗರದಲ್ಲಿರುವ ಕೇಂದ್ರೀಯ ಸಂಸ್ಥೆಯ ಕಚೇರಿಗೆ ಆಗಮಿಸಿದ ಮರಿಗೌಡ ಅವರು ನಿರಂತರವಾಗಿ 5 ಗಂಟೆಗಳಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಎಎಸ್ ಅಧಿಕಾರಿ, ರಾಯಚೂರು ಕಾಂಗ್ರೆಸ್ ಸಂಸದ ಜಿ ಕುಮಾರ್ ನಾಯ್ಕ್ ಮತ್ತು ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಸಿ ಟಿ ಕುಮಾರ್ ಅವರನ್ನು ಬುಧವಾರ ಇಡಿ ಅಧಿಕಾರಿಗಳು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.
ಶ್ರೀರಂಗಪಟ್ಟಣದ ಐತಿಹಾಸಿಕ ಜಾಮಾ ಮಸೀದಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾವನ್ನು ತೆರವುಗೊಳಿಸುವಂತೆ ಮಂಡ್ಯ ಜಿಲ್ಲಾಡಳಿತ ಮತ್ತು ರಾಜ್ಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದೆ. ಅಭಿಷೇಕ್ ಗೌಡ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರಿದ್ದ ವಿಭಾಗೀಯ ಪೀಠದ ಮುಂದೆ ಕೇಂದ್ರದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು, 1951ರಲ್ಲಿ ಜಾಮಾ ಮಸೀದಿಯನ್ನು ಸಂರಕ್ಷಿತ ಸ್ಮಾರಕವಾಗಿ ಘೋಷಿಸಲಾಯಿತು. ಆದರೂ ಅನಧಿಕೃತ ಮದರಸಾ ಚಟುವಟಿಕೆಗಳು ಅಲ್ಲಿ ಮುಂದುವರೆದಿವೆ ಎಂದು ವಾದಿಸಿದರು. ಇನ್ನು ಕೇಂದ್ರದ ಮನವಿಯನ್ನು ವಿರೋಧಿಸಿರುವ ವಕ್ಫ್ ಬೋರ್ಡ್ ಮಸೀದಿಯನ್ನು ತನ್ನ ಆಸ್ತಿ ಎಂದು ಹೇಳಿಕೊಂಡಿದ್ದು ಅಲ್ಲಿ ಮದರಸಾ ನಡೆಸುವ ಹಕ್ಕನ್ನು ಸಮರ್ಥಿಸಿಕೊಂಡಿದೆ.
ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಬಿಲ್‌ಗಳ ಮೇಲೆ 2 ರಿಂದ 3 ರೂಪಾಯಿ ಗ್ರೀನ್ ಸೆಸ್ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವರದಿಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ತಳ್ಳಿಹಾಕಿದ್ದಾರೆ. ಅಲ್ಲದೆ ಬಿಜೆಪಿಗರು ಈ ಬೋಗಸ್ ಸುದ್ದಿಯನ್ನು ಹರಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ನೀರಿನ ಬಿಲ್‌ಗಳ ಮೇಲಿನ ಹಸಿರು ಸೆಸ್ ವಿಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಶಿವಕುಮಾರ್ ಹೇಳಿದರು. ಪರಿಸರ-ಸೂಕ್ಷ್ಮ ಪಶ್ಚಿಮ ಘಟ್ಟಗಳನ್ನು ಉಳಿಸುವ ಸಲುವಾಗಿ, ಕರ್ನಾಟಕದ ಅರಣ್ಯ ಇಲಾಖೆಯು ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕಾರ್ಪಸ್ ನಿಧಿಯನ್ನು ಸಂಗ್ರಹಿಸಲು, ಈ ನದಿಗಳ ನೀರು ಪೂರೈಕೆಯಾಗುವ ನಗರಗಳಿಗೆ ಹಸಿರು ಸೆಸ್ ವಿಧಿಸುವ ಬಗ್ಗೆ 7 ದಿನಗಳೊಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ ಎಂದು ವರದಿಯಾಗಿತ್ತು.
Advertisement