ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಬಳಸಿಕೊಂಡು ಉದ್ಯೋಗದ ನೆಪದಲ್ಲಿ ವಂಚನೆ, ಸೈಬರ್ ಅಪರಾಧ: ರಾಜಸ್ಥಾನದ ಗ್ಯಾಂಗ್ ಬಂಧನ

ಬಂಧಿತರು ಪ್ರತಿಷ್ಠಿತ ಕಂಪನಿಗಳಲ್ಲಿ ಅರೆಕಾಲಿಕ ಉದ್ಯೋಗದ ಭರವಸೆ ನೀಡಿ ಸಂತ್ರಸ್ತರಿಗೆ ಆಮಿಷವೊಡುತ್ತಿದ್ದರು ಎನ್ನಲಾಗಿದೆ. ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಈ ಬಂಧನ ನಡೆದಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಭಾರತದ ಕಾಲೇಜು ವಿದ್ಯಾರ್ಥಿಗಳು ತೆರೆದಿರುವ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ನಕಲಿ ಉದ್ಯೋಗದ ಆಫರ್‌ ನೀಡಿ ಜನರನ್ನು ವಂಚಿಸುತ್ತಿದ್ದ ಮತ್ತು ಸೈಬರ್ ಅಪರಾಧದಲ್ಲಿ ತೊಡಗಿದ್ದ ನಾಲ್ವರನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಆರೋಪಿಗಳನ್ನು ಅಭಯ್ ಧನ್ ಚರಣ್ (19), ಅರವಿಂದ್ ಕುಮಾರ್ (19), ಪವನ್ ಬಿಷ್ಣೋಯಿ (18), ಮತ್ತು ಸವಾಯಿ ಸಿಂಗ್ (21) ಎಂದು ಗುರುತಿಸಲಾಗಿದೆ. ಬಂಧಿತರು ಪ್ರತಿಷ್ಠಿತ ಕಂಪನಿಗಳಲ್ಲಿ ಅರೆಕಾಲಿಕ ಉದ್ಯೋಗದ ಭರವಸೆ ನೀಡಿ ಸಂತ್ರಸ್ತರಿಗೆ ಆಮಿಷವೊಡುತ್ತಿದ್ದರು ಎನ್ನಲಾಗಿದೆ. ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಈ ಬಂಧನ ನಡೆದಿದೆ. ಅವರಿಗೆ ಅರೆಕಾಲಿಕ ಉದ್ಯೋಗ ಒದಗಿಸುವ ನೆಪದಲ್ಲಿ 12,43,250 ರೂ. ವಂಚಿಸಲಾಗಿತ್ತು.

ಕಾಲೇಜು ವಿದ್ಯಾರ್ಥಿಯೊಬ್ಬನ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗಿತ್ತು. ಇದು ಗ್ಯಾಂಗ್ ಕಾರ್ಯಾಚರಣೆಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ಕಾರಣವಾಯಿತು. ತನಿಖೆಯ ವೇಳೆ ಗ್ಯಾಂಗ್ ಕಾಲೇಜು ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿರುವುದು ಪೊಲೀಸರಿಗೆ ಪತ್ತೆಯಾಗಿದೆ.

ವಂಚನೆಯ ವಹಿವಾಟಿಗೆ ಅನುಕೂಲವಾಗುವಂತೆ ಬಳಸಲಾದ ಬ್ಯಾಂಕ್ ಖಾತೆಗಳ ಪಾಸ್ ಬುಕ್, ಚೆಕ್ ಬುಕ್ ಮತ್ತಿತರ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಂತ್ರಿಕ ಕಣ್ಗಾವಲು ಬಳಸಿ ಶಂಕಿತರನ್ನು ಪತ್ತೆಹಚ್ಚಿದ ಪೊಲೀಸರು ರಾಜಸ್ಥಾನದ ಉದಯಪುರ ಮತ್ತು ಜೋಧ್‌ಪುರದಲ್ಲಿ ಅವರನ್ನು ಬಂಧಿಸಿದ್ದಾರೆ.

ವಶಕ್ಕೆ ಪಡೆದ ವಸ್ತುಗಳಲ್ಲಿ 19 ಮೊಬೈಲ್ ಫೋನ್‌ಗಳು, ಎರಡು ಲ್ಯಾಪ್‌ಟಾಪ್‌ಗಳು, 20 ಸಿಮ್ ಕಾರ್ಡ್‌ಗಳು, 34 ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು 75,000 ರೂ ನಗದು ಸೇರಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Casual Images
ಆನ್‌ಲೈನ್ ಉದ್ಯೋಗದ ಹೆಸರಲ್ಲಿ ಬಹುಕೋಟಿ ವಂಚನೆ: 10 ಮಂದಿ ಆರೋಪಿಗಳ ಬಂಧನ, 21 ರಾಜ್ಯಗಳಲ್ಲಿ 122 ಪ್ರಕರಣ ಪತ್ತೆ..!

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ತಂಡವು ಬ್ಯಾಂಕ್ ಖಾತೆ ತೆರೆಯಲು 2,000 ರೂಪಾಯಿ ಪ್ರೋತ್ಸಾಹಧನ ನೀಡುತ್ತಿತ್ತು. ಮೋಸದ ಚಟುವಟಿಕೆಗಳ ಬಗ್ಗೆ ತಿಳಿಯದ ವಿದ್ಯಾರ್ಥಿಗಳು ತಮ್ಮ ಖಾತೆಗಳನ್ನು ಗ್ಯಾಂಗ್ ಬಳಸಲು ಅವಕಾಶ ಮಾಡಿಕೊಟ್ಟಿದ್ದರು. ಅರೆಕಾಲಿಕ ಉದ್ಯೋಗ ಅಥವಾ ಹೂಡಿಕೆ ಯೋಜನೆ ಬಯಸುವ ಜನರನ್ನು ಗುರಿಯಾಗಿಸಲು ವಂಚಕರು ಈ ಖಾತೆಗಳನ್ನು ಬಳಸುತ್ತಿದ್ದರು. ವಿದ್ಯಾರ್ಥಿಗಳ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಸಂತ್ರಸ್ತರಿಗೆ ಸೂಚಿಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿಗಳು ಎಟಿಎಂ ಕಾರ್ಡ್‌ಗಳು, ಪಾಸ್‌ಬುಕ್‌ಗಳು ಮತ್ತು ಬ್ಯಾಂಕ್ ಖಾತೆಗಳ ಚೆಕ್‌ಬುಕ್‌ಗಳನ್ನು ಹೊಂದಿದ್ದರು. ಹಣ ಠೇವಣಿ ಮಾಡಿದ ನಂತರ, ಆರೋಪಿಗಳು ಅದನ್ನು ಹಿಂಪಡೆದು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸುತ್ತಿದ್ದರು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com