
ಬೆಂಗಳೂರು: ಆನ್‌ಲೈನ್ ಉದ್ಯೋಗದ ಹೆಸರಿನಲ್ಲಿ ಬಹುಕೋಟಿ ವಂಚನೆ ನಡೆಸಿದ್ದ ಬೃಹತ್ ಜಾಲವೊಂದನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಬೇಧಿಸಿದ್ದು, 10 ಮಂದಿ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸೈಯದ್ ಯಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಾಹಿನ್, ಮೊಹಮ್ಮದ್ ಮುಝಮ್ಮಿಲ್, ತೇಜೇಶ್, ಚೇತನ್, ವಸೀಂ, ಸೈಯದ್ ಝಾಯೀದ್, ಅಬ್ದುಲ್ ಅನಾನ್ ಹಾಗೂ ಓಂ ಪ್ರಕಾಶ್ ಎಂದು ಗುರ್ತಿಸಲಾಗಿದೆ.
ಎಲ್ಲಾ ಆರೋಪಿಗಳು ಈ ಪ್ರಕರಣದಂತೆಯೇ, ಭಾರತದಾದ್ಯಂತ ವಿವಿಧ 21 ರಾಜ್ಯಗಳಲ್ಲಿ ಒಟ್ಟು 122 ಎನ್.ಸಿ.ಆರ್.ಪಿ ಪ್ರಕರಣಗಳು ದಾಖಲಾಗಿರುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳಿಂದ ತಿಳಿದುಬಂದಿದೆ.
ಆಂಧ್ರ ಪ್ರದೇಶದಲ್ಲಿ 10, ಅಸ್ಸಾಂನಲ್ಲಿ 1, ಬಿಹಾರ 6, ಚಂಡೀಘಡದಲ್ಲಿ 1, ಛತ್ತೀಸ್‌ಘಡದಲ್ಲಿ 3, ದೆಹಲಿಯಲ್ಲಿ 3, ಗುಜರಾತ್‌ನಲ್ಲಿ 7, ಹರಿಯಾಣದಲ್ಲಿ 1, ಹಿಮಾಚಲ ಪ್ರದೇಶದಲ್ಲಿ 1, ಕರ್ನಾಟಕದಲ್ಲಿ 9, ಕೇರಳದಲ್ಲಿ 2, ಮಧ್ಯಪ್ರದೇಶದಲ್ಲಿ 1, ಮಹಾರಾಷ್ಟ್ರದಲ್ಲಿ 12, ಒಡಿಶಾದಲ್ಲಿ 2, ಪಂಜಾಬ್‌ನಲ್ಲಿ 4, ರಾಜಸ್ತಾನದಲ್ಲಿ 5, ತಮಿಳನಾಡಿನಲ್ಲಿ 20, ತೆಲಂಗಾಣದಲ್ಲಿ 12, ಉತ್ತರ ಪ್ರದೇಶದಲ್ಲಿ 16, ಉತ್ತರಾಖಂಡದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 3, ಮತ್ತು ಬೆಂಗಳೂರು ನಗರ ಉತ್ತರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಗಲಗುಂಟೆ ಟಿ.ದಾಸರಹಳ್ಳಿಯ ವ್ಯಕ್ತಿಯೊಬ್ಬರ ಮೊಬೈಲ್‌ಗೆ ಕಳೆದ ಜೂನ್ 7ರಂದು ಜಾಲದಲ್ಲಿದ್ದ ಆರೋಪಿಯು ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿ ಆನ್‌ಲೈನ್ ಉದ್ಯೋಗ ನೀಡುವುದಾಗಿ ತಿಳಿಸಿದ್ದಾನೆ. ಬಳಿಕ ವಾಟ್ಸಾಪ್‌ನಲ್ಲಿ ಕೆಲವು ಲಿಂಕ್‌ಗಳನ್ನು ಅಪರಿಚಿತ ವ್ಯಕ್ತಿಯು ಕಳುಹಿಸಿ ಟೆಲಿಗ್ರಾಂ ಗ್ರೂಪ್‌ಗೆ ಸೇರ್ಪಡಿಸಿದ ನಂತರ ಟಾಸ್ಕ್‌ಗಳನ್ನು ನೀಡಿದ್ದು, ಈ ಟಾಸ್ಕಿನಲ್ಲಿ ಐಷಾರಾಮಿ ಹೋಟೆಲ್‌ಗಳ ರೀವಿವ್ಯೂವನ್ನು ಮಾಡುವಂತೆ ತಿಳಿಸಿದ್ದಾನೆ. ಈ ರಿವ್ಯೂ ಮಾಡಿದರೆ ಹಣ ಸಿಗುವುದಾಗಿ ಪುಸಲಾಯಿಸಿ, ಬಳಿಕ ಅಕೌಂಟ್‌ಗೆ 400ರಿಂದ 500ರೂ ಸಂದಾಯ ಮಾಡುತ್ತಿದ್ದ. ಇದೇ ರೀತಿ ಹಲವಾರು ರಿವ್ಯೂ ರಿಪೋರ್ಟ್‌ಗಳನ್ನು ತರಿಸಿಕೊಂಡು ಹೆಚ್ಚಿನ ಹಣವನ್ನು ಸಂದಾಯ ಮಾಡಿ ನಂಬಿಕೆ ಹುಟ್ಟಿಸಲಾಗಿತ್ತು.
ಇದಲ್ಲದೇ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೂಡಿಕೆ ಮಾಡಿದ್ದಲ್ಲಿ ಹೆಚ್ಚಿನ ಲಾಭ ಬರುವುದಾಗಿ ನಂಬಿಸಿ, ಜೂನ್ 6ರಿಂದ ಜುಲೈ1ರ ವರೆಗೆ 25,37,815 ರೂ ಹಣವನ್ನು ವರ್ಗಾಯಿಸಿಕೊಂಡು ವಂಚನೆ ನಡೆಸಿದರು. ಬಳಿಕ ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಉತ್ತರ ವಿಭಾಗದ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ತನಿಖೆಯನ್ನು ಕೈಗೊಂಡ ಸೈಬರ್ ಕ್ರೈಂ ಪೊಲೀಸರು, ವಿವಿಧ ಬ್ಯಾಂಕ್‌ಗಳ ಅಕೌಂಟ್‌ಗಳಿಗೆ ಹಣವು ವರ್ಗಾವಣೆಯಾಗಿರುವ ಖಾತೆಗಳ ಖಾತೆದಾರರ ವಿವರಗಳನ್ನು ಸಂಪೂರ್ಣವಾಗಿ ಪಡೆದುಕೊಂಡು, ಈ ಜಾಲದಲ್ಲಿ ತೊಡಗಿಸಿಕೊಂಡಿದ್ದ 10 ಮಂದಿಯ ಪೈಕಿ 7 ಮಂದಿಯನ್ನು ಕಳೆದ ಸೆ. 13ರಂದು ಆರ್.ಟಿ. ನಗರದ 13ನೇ ಕ್ರಾಸ್‌ನ ಕಾಫಿಡೇ ಮುಂಭಾಗ ಬಂಧಿಸಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಹಾಗೂ ಮೂರು ಬ್ಯಾಗ್‌ಗಳನ್ನು ಕೂಡ ಜಪ್ತಿ ಮಾಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ಠಾಣೆಗೆ ಕರೆತಂದು ಬ್ಯಾಗ್‌ಗಳನ್ನು ಪರಿಶೀಲಿಸಿದಾಗ, 99 ಡಿಬಿಟ್ ಕಾರ್ಡ್‌ಗಳು, 50 ಬ್ಯಾಂಕ್ ಪಾಸ್ ಪುಸ್ತಕಗಳು, 41 ಸಿಮ್ ಕಾರ್ಡ್‌ಗಳು, 1 ಲ್ಯಾಪ್‌ಟಾಪ್, 23 ಮೊಬೈಲ್ ಗಳು ಹಾಗೂ 1.24 ಲಕ್ಷ ಪತ್ತೆಯಾಗಿದ್ದು, ಎಲ್ಲವನ್ನೂ ವಶಪಡಿಸಿಕೊಂಡಿದ್ದಾರೆ.
ಬಂಧಿತರ ವಿಚಾರಣೆಯ ವೇಳೆ ತಾವು ಮಾಡುತ್ತಿದ್ದ ವಂಚನೆಯ ಜಾಲವನ್ನು ಬಾಯ್ಬಿಟ್ಟಿದ್ದು, ತಲೆಮರೆಸಿಕೊಂಡಿದ್ದ ಇತರ ಮೂವರ ಬಗ್ಗೆ ನೀಡಿದ ಮಾಹಿತಿಯನ್ನು ಆಧರಿಸಿ ಅವರನ್ನೂ ಕೂಡ ಬಂಧಿಸಲಾಗಿದೆ.
ಬಂಧಿತರಲ್ಲಿ ಮೂವರು ಚೀನಾಕ್ಕೆ ಹೋಗಿದ್ದು, ಅಲ್ಲಿನ ಸೈಬರ್ ವಂಚಕರನ್ನು ಭೇಟಿ ಮಾಡಿರುವುದು ಪತ್ತೆಯಾಗಿದೆ. ಅಲ್ಲಿಂದ ವಾಪಾಸು ಬರುವ ವೇಳೆಯೇ ಅವರು ಸಿಕ್ಕಿಬಿದ್ದಿದ್ದಾರೆ.
ಚೀನಾದಿಂದ ಬಂದ ಆರೋಪಿಗಳಿಂದ 6 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲ 10 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮತ್ತೆ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.
ಬಂಧಿತ 10 ಆರೋಪಿಗಳ ಪೈಕಿ ಇಬ್ಬರು ನೆಲಗದರನಹಳ್ಳಿ, ಪೀಣ್ಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಕಚೇರಿಯನ್ನು ಹೊಂದಿದ್ದು, ಈ ಕಚೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ್ದ 47 ಬ್ಯಾಂಕ್ ಪಾಸ್‌ಬುಕ್‌ಗಳು, 48 ಸಿಮ್ ಕಾರ್ಡ್‌ಗಳು, 31 ಡೆಬಿಟ್ ಕಾರ್ಡ್‌ಗಳು, 9 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತರ ಪೈಕಿ ಮೂವರು ಆರೋಪಿಗಳು ಸಂಪಿಗೆಹಳ್ಳಿ ಪಿಜಿಯಲ್ಲಿ ವಾಸವಾಗಿದ್ದು, ಆ ಆರೋಪಿಗಳು ಪಿ.ಜಿಯಲ್ಲಿಟ್ಟಿದ್ದ 52 ಡೆಬಿಟ್ ಕಾರ್ಡ್‌ಗಳು, 34 ಮೊಬೈಲ್ ಫೋನ್‌ಗಳು, 40 ಸಿಮ್‌ಕಾರ್ಡ್‌ಗಳು, 1 ಲ್ಯಾಪ್‌ಟಾಪ್ ಹಾಗೂ 30 ಬ್ಯಾಂಕ್ ಪಾಸ್ ಬುಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
Advertisement