ಬಳ್ಳಾರಿ: ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾನ ನಡೆದು 2 ದಿನಗಳು ಕೆಳೆದಿದ್ದು, ಇದೀಗ ಎಲ್ಲರ ಚಿತ್ತರ ಫಲಿತಾಂಶದತ್ತ ನೆಟ್ಟಿದೆ. ಎಲ್ಲಿ ನೋಡಿದರೂ ಯಾರು ಗೆಲ್ತಾರೆ? ಯಾರು ಸೋಲ್ತಾರೆ? ಎಂಬ ಮಾತುಗಳು ಕೇಳಿ ಬರುತ್ತಿವೆ. ಗೆಲುವು, ಸೋಲಿನ ಬಗ್ಗೆ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ. ಆದರೆ, ಮತ್ತೆ ಕೆಲವರಂತೂ ಈ ಬಾರಿ ತನ್ನ ನೆಚ್ಚಿನ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂಬ ಬಲವಾದ ವಿಶ್ವಾಸದಲ್ಲಿದ್ದರೆ, ಉಳಿದವರು ಬೆಟ್ಟಿಂಗ್ ಕಟ್ಟಲು ಶುರು ಮಾಡಿದ್ದಾರೆ.
ಸಂಡೂರಿನ ರೈತನೊಬ್ಬ ಒಂದು ಹೆಜ್ಜೆ ಮುಂದೆ ಹೋಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರ ಗೆಲುವು ಶತಃಸಿದ್ಧ. ನಾನು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಅನುಯಾಯಿಯಾಗಿದ್ದು, ಈ ಬಾರಿ ನನ್ನ ಇಡೀ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ. ಅನ್ನಪೂರ್ಣ ಅವರು ಗೆಲ್ಲುವ ವಿಶ್ವಾಸವಿದೆ. ಆದರೆ, ನನ್ನ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾರಾದರೂ ಜೂಜು ಕಟ್ಟುವುದಿದ್ದರೆ ಕಟ್ಟಲಿ. ಅದಕ್ಕೆ ನಾನು ಆಹ್ವಾನ ನೀಡುತ್ತೇನೆ. ಗೆದ್ದರೆ ನನ್ನ 5 ಎಕರೆ ಕೃಷಿ ಭೂಮಿ ನೀಡಲು ನಾನು ಸಿದ್ಧನಿದ್ದೇನೆಂದು ಹೇಳಿದ್ದಾರೆ.
ಉಪಚುನಾವಣೆ ಕುರಿತು ಬೆಟ್ಟಿಂಗ್ ಭರಾಟೆ ಜೋರಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಕೀಯ ವಿಶ್ಲೇಷ್ಕ ಶ್ರೀನಿವಾಸ್ ರೆಡ್ಡಿಯವರು, ಬೆಟ್ಟಿಂಗ್ ಅಕ್ರಮವಾಗಿದ್ದರೂ, ಚುನಾವಣಾ ಸಂದರ್ಭದಲ್ಲಿ ಇದು ಸಾಮಾನ್ಯವಾಗಿರುವುದು ದುರಾದೃಷ್ಟಕರ ಸಂಗತಿ. ಯಾವುದೇ ರೀತಿಯ ಬೆಟ್ಟಿಂಗ್ ಸಮಾಜಕ್ಕೆ ಒಳ್ಳೆಯದಲ್ಲ. ಚುನಾವಣೆಯಲ್ಲಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಸೂಕ್ತ ಕಾನೂನು ಇಲ್ಲ. ಸಾರ್ವಜನಿಕರು ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂಬುದನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಉಪಚುನಾವಣೆಯ ಫಲಿತಾಂಶವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ನವೆಂಬರ್ 23 ರಂದು ಪ್ರಕಟಿಸಲಿದೆ.
Advertisement