ಚುನಾವಣಾಧಿಕಾರಿಗಳು.
ಚುನಾವಣಾಧಿಕಾರಿಗಳು.

ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಅಂತ್ಯ: ಎಲ್ಲರ ಚಿತ್ತ ಈಗ ನವೆಂಬರ್ 23ರತ್ತ

ಸಂಡೂರು ಕ್ಷೇತ್ರದಲ್ಲಿ 6, ಶಿಗ್ಗಾಂವಿ ಕ್ಷೇತ್ರದಲ್ಲಿ 8 ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 31 ಅಭ್ಯರ್ಥಿಗಳು ಇದ್ದರು. ಇವರು ಸೇರಿ ಒಟ್ಟು 45 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ.
Published on

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಉಪಚುನಾವಣೆಯಲ್ಲಿ ಕೆಲವು ಮತಗಟ್ಟೆಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನು ಹೊರತುಪಡಿಸಿದರೆ ಶಾಂತಿಯುತ ಮತದಾನವಾಗಿದ್ದು, ಚನ್ನಪಟ್ಟಣದಲ್ಲಿ ಗರಿಷ್ಠ ಶೇ.88.80, ಶಿಗ್ಗಾಂವಿ ಶೇ. 80.48 ಮತ್ತು ಸಂಡೂರಿನಲ್ಲಿ 76.24 ಮತದಾನವಾಗಿದೆ.

ಸಂಡೂರು ಕ್ಷೇತ್ರದಲ್ಲಿ 6, ಶಿಗ್ಗಾಂವಿ ಕ್ಷೇತ್ರದಲ್ಲಿ 8 ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 31 ಅಭ್ಯರ್ಥಿಗಳು ಇದ್ದರು. ಇವರು ಸೇರಿ ಒಟ್ಟು 45 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. ಮತಯಂತ್ರಗಳನ್ನು ಎಣಿಕೆ ಕೇಂದ್ರದಲ್ಲಿ ಭದ್ರವಾಗಿಡಲಾಗಿದ್ದು, ಇದೇ ತಿಂಗಳು 23ರಂದು ಮತ ಎಣಿಕೆ ನಡೆಯಲಿದೆ.

ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಅತಿ ಹೆಚ್ಚು ಅಂದರೆ ಶೇ.88.80ರಷ್ಟು ಮತದಾನವಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ.80.48 ಮತ್ತು ಸಂಡೂರಿನಲ್ಲಿ ಶೇ.76.24ರಷ್ಟು ಮತದಾನವಾಗಿದೆ. ಕಳೆದ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾಗಿ ಶಿಗ್ಗಾಂವಿ ಮತ್ತು ಚನ್ನಪಟ್ಟಣದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದ್ದು, ಸಂಡೂರು ಕ್ಷೇತ್ರದಲ್ಲಿ ಮತದಾನ ಪ್ರಮಾಣ ಇಳಿಮುಖವಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಶೇ.85.27ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಮತದಾನದ ವೇಳೆ ಮತಗಟ್ಟೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು.

ಸಂಡೂರಿನಲ್ಲಿ ಎನ್'ಡಿಎ ಅಭ್ಯರ್ಥಿಯಾಗಿ ಬಂಗಾರು ಹನುಮತು, ಕಾಂಗ್ರೆಸ್ ಅಭ್ಯರ್ಥಿಯಾಗಿ ಅನ್ನಪೂರ್ಣ ಅವರು ಕಣದಲ್ಲಿದ್ದಾರೆ.ಚನ್ಪಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ.ಯೋಗೇಶ್ವರ್, ಎನ್'ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಎನ್'ಡಿಎ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಸೇರಿ ಒಟ್ಟು 45 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ನ.23 ರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಬಹಿರಂಗಗೊಳ್ಳಲಿದೆ.

ಚುನಾವಣಾಧಿಕಾರಿಗಳು.
Karnataka Bypolls LIVE: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆ: ಬೊಂಬೆ ನಾಡಿನಲ್ಲಿ ದಾಖಲೆಯ ಮತದಾನ

ಈ ನಡುವೆ ಚನ್ನಪಟ್ಟಣ ಕ್ಷೇತ್ರದ ಅಕ್ಕೂರು ಎಂಬಲ್ಲಿ ಜೆಡಿಎಸ್ ಮುಖಂಡರೊಬ್ಬರು ಮತದಾರರಿಗೆ ಹಣ ಹಂಚುತ್ತಿರುವ ಸುದ್ದಿ ಕೇಳಿ ಬಂದಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೇ ಚುನಾವಣಾಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ರಾಮನಗರ ಸಹಾಯಕ ಆಯುಕ್ತರಾದ ಚುನಾವಣಾಧಿಕಾರಿ ಬಿನಯ್ ಅವರು ಮಾಹಿತಿ ನೀಡಿದ್ದಾರೆ.

ದಶಕಗಳಿಂದ ವಾಸಿಸುತ್ತಿದ್ದರೂ ತಮ್ಮ ಭೂಮಿಗೆ ಕಂದಾಯ ಇಲಾಖೆ ಅಧಿಕಾರಿಗಳು ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಸವಣೂರು ಪಟ್ಟಣದ ದಂಡಿಪೇಠ ಕ್ಷೇತ್ರದ ಮತದಾರರು ಮತದಾನ ಬಹಿಷ್ಕರಿಸಿದ್ದು ಇದೇ ವೇಳೆ ಕಂಡು ಬಂದಿತು.

ಇನ್ನು ಮೂರು ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡ ಬೆನ್ನಲ್ಲೇ ಇವಿಎ ಯಂತ್ರಗಳನ್ನು ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ನಲ್ಲಿಡಲಾಗಿದೆ. ಸಿಆರ್'ಪಿಎಫ್ ಯೋಧರು, ಸ್ಥಳೀಯ ಪೊಲೀಸರ ಕಣ್ಗಾವಲಿನಲ್ಲಿ ಭದ್ರಪಡಿಸಲಾಗಿದೆ. ಅಲ್ಲದೆ, ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆಯು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಸಂಡೂರು ಕ್ಷೇತ್ರದ ಮತ ಎಣಿಕೆಯು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಇನ್ನು ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆಯು ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

X

Advertisement

X
Kannada Prabha
www.kannadaprabha.com