ಬೆಂಗಳೂರು: ಸಿಬಿಐ ತನಿಖೆ ನಡೆಸದೇ ವಾಪಸ್ ಮಾಡಿದ್ದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯ 6 ಅದಿರು ಸಾಗಾಣಿಕೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಎಸ್ಐಟಿ ರಚನೆಗೆ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಎಚ್.ಕೆ ಪಾಟೀಲ್ ಅವರು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ ಹಾಗೂ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಸಿ.ಬಿ.ಐ ವಾಪಸ್ಸು ಕಳುಹಿಸಿರುವ ಹಿನ್ನೆಲೆಯಲ್ಲಿ ಆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಣಯಿಸಲಾಗಿದೆ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ಎಲ್ಲಾ ಪ್ರಕರಣಗಳನ್ನು ಸೂಕ್ತವಾದ ತನಿಖೆಗೆ ಒಳಪಡಿಸುವುದು ಅಗತ್ಯವಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟ ಸಭೆಗೆ ಈ ಪ್ರಕರಣಗಳ ತನಿಖೆ ಕುರಿತ ವಿವರಗಳನ್ನು ಮಂಡಿಸಬೇಕೆಂದು ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ, ನಿರ್ಣಯಿಸಲಾಗುವುದು ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡಿರುವ ‘ಸಿ’ ವರ್ಗದ 10 ಕಂಪನಿಗಳ ವಿರುದ್ಧ ಲೋಕಾಯುಕ್ತ ಎಸ್‌ಐಟಿ ತನಿಖೆ ನಡೆಸಲಿದೆ ಎಂದು ವಿವರಿಸಿದರು.
ಮೈಸೂರು ಮ್ಯಾಂಗನೀಸ್ ಕಂಪನಿ, ಎಂ.ದಶರಥ ರಾಮಿ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಕರ್ನಾಟಕ ಲಿಂಪೊ, ಅಂಜನಾ ಮಿನರಲ್ಸ್, ರಾಜೀಯ ಖಾನುಂ, ಮಿಲನ ಮಿನರಲ್ಸ್ (ಮಹಾಲಕ್ಷಿ & ಕಂ), ಎಂ.ಶ್ರೀನಿವಾಸುಲು, ಚನ್ನಕೇಶವ ರೆಡ್ಡಿ (ಲಕ್ಷ್ಮೀನರಸಿಂಹ ಮೈನಿಂಗ್ ಕಂಪನಿ ಮತ್ತು ಜಿ.ರಾಯಶೇಖರ್ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ ಆರೋಪ ಹೊತ್ತಿರುವ ಕಂಪನಿಗಳಾಗಿವೆ.
ಈ ಕಂಪನಿಗಳು ಮಂಜೂರಾದ ಗುತ್ತಿಗೆ ಪ್ರದೇಶದ ಹೊರಗೆ ಶೇ.10 ಕ್ಕಿಂತ ಹೆಚ್ಚು ಗಣಿಗಾರಿಕೆ ಪ್ರದೇಶದಲ್ಲಿ ಗಣಿಗಾರಿಗೆ ನಡೆಸಿ ಅರಣ್ಯ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಚಿಸಿರುವ ಎಸ್ಐಟಿಗೆ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
Advertisement