ಬೆಂಗಳೂರು: ಮಹಾರಾಣಿ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಗುರುವಾರ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಮತ್ತು ಬಿ.ವೀರಪ್ಪ ಅವರು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಇರುವ ಕುಂದುಕೊರತೆಗಳನ್ನು ಪರಿಶೀಲಿಸಿ, ಶೀಘ್ರಗತಿಯಲ್ಲಿ ಪರಿಹರಿಸುವಂತೆ ಕುಲಪತಿ, ಉನ್ನತ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದರು.
ಕಾಲೇಜು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಹಲವು ಸಮಸ್ಯೆಗಳಿವೆ ಎಂದು ಕೆಲ ವಿದ್ಯಾರ್ಥಿನಿಯರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದರು. ಇದನ್ನು ಪರಿಗಣಿಸಿದ ಉಪ ಲೋಕಾಯುಕ್ತರು, ವಿವಿಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಜೊತೆ ಮಾತನಾಡಿ, ಮಾಹಿತಿ ಪಡೆದುಕೊಂಡರು.
ಇಬ್ಬರೂ ಉಪ ಲೋಕಾಯುಕ್ತರು ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಹಾಗೂ ವಿಜ್ಞಾನ ವಿಭಾಗದ ಕಾಲೇಜುಗಳಿಗೆ ಮೊದಲು ಭೇಟಿ ನೀಡಿದರು.
ಎರಡೂ ಕಾಲೇಜುಗಳ ಕಟ್ಟಡಗಳು ಹಳೆಯದಾಗಿದ್ದು, ಕೆಲವೆಡೆ ಶಿಥಿಲವಾಗಿವೆ. ಬಣ್ಣಗಳು ಮಾಸಿರುವುದು, ಕಿಟಕಿ–ಬಾಗಿಲುಗಳು ಹಾಳಾಗಿರುವುದು, ಗೋಡೆಗಳಲ್ಲಿ ನೀರು ಸೋರುತ್ತಿರುವುದು ಹಾಗೂ ಗೋಡೆಗಳ ಮೇಲೆ ಗೀಚುಬರಹ ಇರುವುದನ್ನು ಗಮನಿಸಿದರು.
ವಿವಿಯ ಶೌಚಾಲಯಗಳು ದುರ್ವಾಸನೆ ಬೀರುತ್ತಿದ್ದು, ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸದೇ ಇರುವುದು, ವಿದ್ಯಾರ್ಥಿ ನಿಲಯದಲ್ಲಿ ಸಾಕಷ್ಟು ಕೊಠಡಿಗಳು, ಶೌಚಾಲಯಗಳು ಮತ್ತು ಸ್ನಾನಗೃಹಗಳು ಇಲ್ಲದೇ ಇರುವುದು. ವಿದ್ಯಾರ್ಥಿಗಳಿಗೆ ಸರ್ಕಾರ ಸೂಚಿಸಿದಂತೆ ನಿಯಮಿತ ಮಧ್ಯಂತರದಲ್ಲಿ ಸಿಹಿತಿಂಡಿಗಳು, ಮಾಂಸಾಹಾರಿ ಆಹಾರಗಳು ಮತ್ತು ಮೊಟ್ಟೆಗಳನ್ನು ನೀಡದೇ ಇರುವುದು, ಹಾಸಿಗೆಗಳು, ದಿಂಬುಗಳು ಮತ್ತು ಬೆಡ್‌ಸ್ಪ್ರೆಡ್ ಗಳನ್ನು ಒದಗಿಸದೇ ಇರುವುದು ಕಂಡು ಬಂದಿತು. ಇಲ್ಲದೆ, ಹಾಸ್ಟೆಲ್ ನಲ್ಲಿ ವಿದ್ಯುತ್ ಸಮಸ್ಯೆ, ಕುಡಿಯುವ ನೀರುವ ಪೂರೈಕೆಯಲ್ಲಿ ಕೊರತೆಯಾಗುತ್ತಿರುವುದೂ ಕಂಡು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಉಪಲೋಕಾಯುಕ್ತರು ಇವುಗಳನ್ನು ಶೀಘ್ರವೇ ಸರಿಪಡಿಸಬೇಕು ಎಂದು ಸಂಬಂಧಿತರಿಗೆ ಸೂಚಿಸಿದರು. ಈ ಅವ್ಯವಸ್ಥೆಗಳ ಬಗ್ಗೆ ತನಿಖೆ ನಡೆಸಿ, ವರದಿ ನೀಡಿ ಎಂದು ಲೋಕಾಯುಕ್ತದ ಹೆಚ್ಚುವರಿ ರಿಜಿಸ್ಟ್ರಾರ್‌ಗೆ ಸೂಚಿಸಿದರು.
Advertisement