ವಕ್ಫ್ ಹೆಸರಲ್ಲಿ ಶಾಂತಿ ಕದಡಿದರೆ ನಿರ್ದಾಕ್ಷಿಣ್ಯ ಕ್ರಮ: ಗೃಹ ಸಚಿವ G Parameshwara ಎಚ್ಚರಿಕೆ

ಕೋಮು-ಗಲಭೆ ಶಾಂತಿ ಹಾಳು ಮಾಡಲು ಅವರು ಏನಾದರೂ ಮಾಡಬಹುದು. ಅದಕ್ಕಾಗಿ ಅಭಿಯಾನ ಮಾಡುತ್ತಿದ್ದಾರೆ.
G Parameshwara
ಗೃಹ ಸಚಿವ ಜಿ ಪರಮೇಶ್ವರ (ಸಂಗ್ರಹ ಚಿತ್ರ)
Updated on

ಬೆಂಗಳೂರು: ವಕ್ಪ್ ವಿವಾದ ಸಂಬಂಧ ಬಿಜೆಪಿ ನಾಯಕರ ಪ್ರತಿಭಟನೆಯ ನಡುವೆಯೇ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದು, ವಕ್ಫ್ ಹೆಸರಲ್ಲಿ ಶಾಂತಿ ಕದಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವಕ್ಫ್ ವಿಷಯವನ್ನು ಬಿಜೆಪಿಯವರು ರಾಜಕೀಯ ಅಸ್ತ್ರವಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು-ಗಲಭೆ ನಡೆಸಿ ಶಾಂತಿ ಕದಡುವ ಪ್ರಯತ್ನ ನಡೆದರೆ ಅದನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುವುದು.

ಕೋಮು-ಗಲಭೆ ಶಾಂತಿ ಹಾಳು ಮಾಡಲು ಅವರು ಏನಾದರೂ ಮಾಡಬಹುದು. ಅದಕ್ಕಾಗಿ ಅಭಿಯಾನ ಮಾಡುತ್ತಿದ್ದಾರೆ. ಶಾಂತಿ ಕದಡಲು ಪ್ರಯತ್ನಿಸಿದರೆ ಸುಲಭವಾಗಿ ನಾವು ಬಿಡಲ್ಲ. ಯಾವ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ನೀವು ಊಹೆ ಮಾಡಲು ಆಗುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತಂದು ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರವನ್ನು ಬಿಜೆಪಿ ನಡೆಸಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಸಾಧ್ಯವಿಲ್ಲ. ಗೃಹ ಇಲಾಖೆ ಕಳೆದ ಒಂದೂವರೆ ವರ್ಷದಿಂದ ಸಮರ್ಥವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸಿ ಶಾಂತಿ ಭಂಗವಾಗದಂತೆ ನೋಡಿಕೊಂಡಿದೆ. ಮುಂದೆಯೂ ಶಾಂತಿ ಕದಡಲು ಯಾರಾದರೂ ಪ್ರಯತ್ನಿಸಿದರೆ ಕಠಿಣವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಅಷ್ಟು ಸುಲಭವಾಗಿ ಬಿಡಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಶೇ. ೪೦ ರಷ್ಟು ಕಮೀಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿದೆ ಎಂಬ ಬಿಜೆಪಿ ಆರೋಪ ಸುಳ್ಳು ಎಂದು ಅವರು ಹೇಳಿದರು.

G Parameshwara
ರಾಜ್ಯದಲ್ಲಿ ವಕ್ಫ್ ಸಮರ: ಸಮುದಾಯಗಳ ವಿಭಜನೆ ಆರೋಪ, ಹಲವೆಡೆ ಉದ್ವಿಗ್ನ ವಾತಾವರಣ ಸೃಷ್ಟಿ!

ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣನವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಭ್ರಷ್ಟಾಚಾರ ಹೆಚ್ಚಾಗಿದೆ. ಕಾಮಗಾರಿಗಳಲ್ಲಿ ಕಮೀಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದರು.

ಅದರ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಶೇ. 40ರಷ್ಟು ಕಮೀಷನ್ ಆರೋಪ ಮಾಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಮೀಷವೊಡ್ಡಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪಕ್ಕೆ ಬಿಜೆಪಿ ಸಾಕ್ಷ್ಯ ಕೇಳುತ್ತಿರುವುದಕ್ಕೆ ಗರಂ ಆದ ಸಚಿವ ಡಾ. ಜಿ. ಪರಮೇಶ್ವರ್, 'ಪ್ರಧಾನಿ ಮೋದಿಯವರು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಇದಕ್ಕೆ ದಾಖಲೆ ಕೊಟ್ಟಿದ್ದಾರೆಯೇ, ಮೊದಲು ಬಿಜೆಪಿ ಮುಖಂಡರು ಪ್ರಧಾನಿಯವರಿಂದ ದಾಖಲೆ ಕೊಡಿಸಲಿ. ನಂತರ ನಾವು ದಾಖಲೆ ಕೊಡುತ್ತೇವೆ' ಎಂದು ಹೇಳಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾಗಿಲ್ಲ ಎಂದು ಹೇಳಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಮುಖ್ಯಮಂತ್ರಿ ಹೇಳಿರುವುದನ್ನು ಸಮರ್ಥಿಸಿಕೊಂಡ ಸಚಿವ ಡಾ. ಜಿ. ಪರಮೇಶ್ವರ್ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದಕ್ಕೆ ದಾಖಲೆಗಳು ಬೇಕಲ್ಲವ್ವೇ, ಸುಳ್ಳು ಹೇಳುವವರ ವಿರುದ್ಧ ಪ್ರಕರಣ ದಾಖಲಿಸಲೇಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com