ಧಾರವಾಡ: ರಾಜ್ಯದಲ್ಲಿ ದಿನ ಕಳೆದಂತೆ ವಕ್ಫ್ ವಿವಾದ ತೀವ್ರತೆ ಪಡೆದುಕೊಳ್ಳುತ್ತಿದ್ದು, ವಿವಾದವು ಸಮುದಾಯಗಳ ನಡುವೆ ಜಟಾಪಟಿ ಶುರುವಾಗುವಂತೆ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಕಲಘಟಗಿಯಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ವೇಳೆ ಮಾರಾಮಾರಿ ಕೂಡ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ಬೆನ್ನಲ್ಲೇ ಕಲಘಟಗಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ವಕ್ಫ್ ತನ್ನ ಆಸ್ತಿಗಳನ್ನು ಗುರುತಿಸಲು ಅದಾಲತ್‌ಗಳನ್ನು ಆಯೋಜಿಸುತ್ತಿದ್ದು, ಈ ವೇಳೆ ಪ್ರತಿಭಟನೆ ಹಾಗೂ ಪರಸ್ಪರ ನಿಂದನೆಗಳು ಶುರುವಾಗಿವೆ.
ಕಲಘಟಗಿಯಲ್ಲಿ ಪರಿಸ್ಥಿತಿ ಎಲ್ಲೆ ಮೀರಿದ್ದು, ಕೆಲವರು ವೈಯಕ್ತಿಕ ನಿಂದನೆ ಮಾಡಿಕೊಂಡು ಹಳ್ಳಿಗಳಲ್ಲಿದ್ದ ಭಾತೃತ್ವ ಹಾಗೂ ಸಾಮಾಜಿಕ ಸಾಮರಸ್ಯ ಕಣ್ಮರೆಯಾಗುವಂತೆ ಮಾಡುತ್ತಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದು, ಇದು ಭಾರತಕ್ಕೆ ಸೇರಿದ್ದು, ಯಾರ ಅಪ್ಪನಿಗೆ ಸೇರಿದ್ದಲ್ಲ ಎಂದು ಹೇಳಿದರೆ, ಮತ್ತೊಂದು ಸಮುದಾಯವ ನಿಮ್ಮ ಅಪ್ಪನ ಆಸ್ತಿಯಲ್ಲ ಎಂದು ಹೇಳುತ್ತಾರೆ. ಹೀಗೆಯೇ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಬಳಿಕ ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳ್ಳುವಂತೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ರೀತಿಯ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ. ಕಾನೂನು ಉಲ್ಲಂಘಿಸುವವರ ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಮುದಾಯದ ಸದಸ್ಯರೊಂದಿಗೆ ಸಭೆಗಳನ್ನು ಕೂಡ ನಡೆಸಲಾಗುವುದು ಎಂದು ತಿಳಿಸಿದರು.
ಈ ನಡುವೆ ಹಿಂದೂ ಕಾರ್ಯಕರ್ತರೊಬ್ಬರು ಭ್ರಷ್ಟ ರಾಜಕೀಯ ನಾಯಕರು ಮತ್ತು ಅವರ ಹಿಂಬಾಲಕರಿಗೆ ತಕ್ಕ ಪಾಠ ಕಲಿಸುವ ಮೂಲಕ ಸಮಸ್ಯೆ ಬಗೆಹರಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಕೆಲ ರಾಜಕೀಯ ಪಕ್ಷದ ನಾಯಕರು ಬಣ್ಣ, ಧರ್ಮ, ಜಾತಿ ಆಧಾರದ ಮೇಲೆ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಜನರು ಅಂತಹ ಜನರನ್ನು ಅರ್ಥಮಾಡಿಕೊಳ್ಳದಿದ್ದರೆ ಮತ್ತು ಅವರ ವಿರುದ್ಧ ದಂಗೆ ಏಳದಿದ್ದರೆ, ಹಿಂದೆಂದೂ ಕಾಣದ ಅತೀದೊಡ್ಡ ಪರಿಸ್ಥಿತಿಗೆ ಸಾಕ್ಷಿಯಾಗಬೇಕಾಗುತ್ತದೆ. ವಕ್ಫ್ ವಿವಾದ ರಾಷ್ಟ್ರದಲ್ಲಿ ದೊಡ್ಡ ಸಮಸ್ಯೆಯಾಗಲಿದೆ. ಅಲ್ಪಸಂಖ್ಯಾತರಿಗಾಗಿ ನಮ್ಮ ದೇಶದಲ್ಲಿ ಹೋರಾಡುವ ಜನರು ಇತರ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರೆಂದು ಪರಿಗಣಿಸಲ್ಪಟ್ಟ ಹಿಂದೂಗಳ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದ್ದಾರೆ.
Advertisement