ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ರದ್ದು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ಬಿಪಿಎಲ್ ಕಾರ್ಡ್‌ಗಳಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿವೆ? ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಅನರ್ಹರ ಕಾರ್ಡ್ ಗಳನ್ನು ವಾಪಾಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮ ಮುಂದಿವೆ. ಈ ಬಗ್ಗೆ ಇನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಅಂತಿಮ ತೀರ್ಮಾನ ಆಗಿಲ್ಲ. ಆದಾಯ ತೆರಿಗೆ ಪಾವತಿಸುವವರ ಬಳಿ, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್ ಇದೆ? ಅರ್ಹರ ಯಾವ ಕಾರ್ಡ್ ಗಳೂ ರದ್ದಾಗುವುದಿಲ್ಲ. ಅನರ್ಹರಿಂದ ವಾಪಾಸ್ ಪಡೆಯುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ 'ನಮ್ಮ ಭೂಮಿ- ನಮ್ಮ ಹಕ್ಕು' ಘೋಷವಾಕ್ಯದಡಿ ಮೂರು ತಂಡಗಳನ್ನು ರಚಿಸಿದೆ. ಈ ಮೂಲಕ ನವೆಂಬರ್ 21 ಅಥವಾ 22ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು-ಗಲಭೆ ನಡೆಸಿ ಶಾಂತಿ ಕಡದುವ ಪ್ರಯತ್ನ ನಡೆಸದರೆ ಅದನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಷಯವನ್ನು ಬಿಜೆಪಿಯವರು ರಾಜಕೀಯ ಅಸ್ತ್ರವಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅಭಿಯಾನ ಮಾಡುತ್ತಿದ್ದಾರೆ. ಶಾಂತಿ ಕದಡಲು ಪ್ರಯತ್ನಿಸಿದರೆ ಸುಲಭವಾಗಿ ನಾವು ಬಿಡಲ್ಲ. ಯಾವ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ನೀವು ಊಹೆ ಮಾಡಲು ಆಗುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವಕನೋರ್ವ ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಡಿವಾಳದಲ್ಲಿ ನಡೆದಿದೆ. ಸಂತ್ರಸ್ತ ಯುವತಿ ಮಡಿವಾಳ ಠಾಣೆಯಲ್ಲಿ ಯುವಕನ ಮೇಲೆ ದೂರು ದಾಖಲಿಸಿ ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕಳೆದ ಮಾರ್ಚ್ ನಲ್ಲಿ ಸಂತ್ರಸ್ತ ಯುವತಿಗೆ ಡೇಟಿಂಗ್ ಆಪ್‌ನಲ್ಲಿ ನಿಹಾಲ್ ಹುಸೇನ್‌ನ ಪರಿಚಯವಾಗಿತ್ತು. ಬಳಿಕ ಅದೇ ತಿಂಗಳಲ್ಲಿ ನಿಹಾಲ್ ಯುವತಿಯನ್ನು ಪಾರ್ಟಿಗೆಂದು ಹೋಟೆಲ್‌ಗೆ ಕರೆಯಿಸಿ ಮದ್ಯ ಬೆರೆಸಿದ ಜ್ಯೂಸ್ ಕೊಟ್ಟ ಅತ್ಯಾಚಾರ ಎಸಗಿದ್ದನು. ಗರ್ಭೀಣಿಯಾಗಿದ್ದ ನನಗೆ ಮೇ ತಿಂಗಳಲ್ಲಿ ಗರ್ಭಪಾತ ಮಾಡಿಸಿದನು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನ ಲಕ್ಕೆಗೌಡನಪಾಳ್ಯದಲ್ಲಿ ನಡೆದಿದೆ. ಮೃತರನ್ನು ಜಾಣಗೆರೆ ಗ್ರಾಮದ ನಿವಾಸಿಗಳಾದ ಶಿವರಾಮಯ್ಯ, ಹರೀಶ್ ಎಂದು ಗುರುತಿಸಲಾಗಿದೆ. ಅಡಿಕೆ ತುಂಬಿಕೊಂಡು ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ರೆಸಾರ್ಟ್ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಇಂದು ಮೃತಪಟ್ಟಿದ್ದಾರೆ. ಈಜಾಡುವಾಗ ಏಕಾಏಕಿ ಮುಳುಗಿ ಮೂವರು ಯುವತಿಯರು ಮೃತಪಟ್ಟಿದ್ದು, ಮೃತರನ್ನು ಮೈಸೂರು ಮೂಲದ ನಿಶಿತ, ಪಾರ್ವತಿ ಮತ್ತು ಕೀರ್ತನ ಎಂದು ಗುರುತಿಸಲಾಗಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ನಿನ್ನೆ ಮೂವರು ಸ್ನೇಹಿತೆಯರು ಮಂಗಳೂರು ಕಡೆಗೆ ಪ್ರವಾಸಕ್ಕೆಂದು ಬಂದಿದ್ದರು. ಇಂದು ಬೆಳಗ್ಗೆ ರೆಸಾರ್ಟ್‌ಗೆ ಆಗಮಿಸಿ ರೂಂ ಬುಕ್ ಮಾಡಿದ್ದರು. ನಂತರ ಈಜಾಡಲು ಸ್ವಿಮ್ಮಿಂಗ್ ಪೂಲ್ ಗೆ ಇಳಿದಿದ್ದಾರೆ. ಈ ವೇಳೆ ಕೊಳದ ಒಂದು ಬದಿ ಆರು ಅಡಿಯಷ್ಟು ಆಳವಿದ್ದು, ಆಯತಪ್ಪಿ ಓರ್ವ ಯುವತಿ ಮುಳುಗಿದ್ದಾಳೆ. ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದು ರೆಸಾರ್ಟ್‌ಗೆ ಬೀಗ ಜಡಿದಿದ್ದಾರೆ.
Advertisement