ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಜನವಸತಿ ಪ್ರದೇಶವಾದ ಕೂಡ್ಲುವಿನಲ್ಲಿ ಮೊದಲ ಅಂಚೆ ಕಚೇರಿ ಇಂದು ಸೋಮವಾರ ಆರಂಭವಾಗಲಿದೆ. ಸಿಲ್ವರ್ ಕಂಟ್ರಿ ರಸ್ತೆಯ ನಿವಾಸಿ 92 ವರ್ಷದ ವಿ ಜಾನಕಿರಾಮನ್ ಇದರ ಹಿಂದಿನ ಪ್ರೇರಕ ಶಕ್ತಿ.
2022 ರಲ್ಲಿ, ಅವರು ಬೆಂಗಳೂರು ಹೆಚ್ಕ್ಯು ಪ್ರದೇಶದ ಪೋಸ್ಟ್‌ಮಾಸ್ಟರ್ ಜನರಲ್ ಎಲ್‌ಕೆ ಡ್ಯಾಶ್ ಅವರನ್ನು ಭೇಟಿ ಮಾಡಿ ಕೂಡ್ಲು ಪ್ರದೇಶಕ್ಕೆ ಅಂಚೆ ಕಚೇರಿ ಸೌಕರ್ಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ದಕ್ಷಿಣ ರೈಲ್ವೇ ವಲಯದ ನಿವೃತ್ತ ಮುಖ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಜಾನಕಿರಾಮನ್ ಅವರು ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ವಿವರಿಸಿದ್ದಾರೆ.
ಇದು ಹೆಚ್ಚಾಗಿ ವಸತಿ ಪ್ರದೇಶವಾಗಿದೆ. ಅನೇಕ ಹಿರಿಯ ನಾಗರಿಕರು ಇಲ್ಲಿ ನೆಲೆಸಿದ್ದಾರೆ. ಹತ್ತಿರದ ಅಂಚೆ ಕಚೇರಿ ಬೊಮ್ಮನಹಳ್ಳಿಯ ಹೃದಯಭಾಗದಲ್ಲಿ 8 ಕಿಲೋಮೀಟರ್ ದೂರದಲ್ಲಿದೆ. ಅನೇಕ ಹಿರಿಯ ನಾಗರಿಕರು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳನ್ನು ಹೊಂದಿದ್ದು, ಅವುಗಳನ್ನು ಆಗಾಗ್ಗೆ ಬಳಸುತ್ತಾರೆ. ದೂರದ ಪ್ರದೇಶಕ್ಕೆ ಹೋಗುವುದು ಹಿರಿಯ ನಾಗರಿಕರಿಗೆ ಕಷ್ಟವಾಗುತ್ತಿತ್ತು. ಇಲ್ಲಿ ಅಂಚೆ ಕಚೇರಿ ತೆರೆದಿದ್ದು ಅನುಕೂಲವಾಗಿದೆ ಎಂದರು.
ಸಮೀಪದ ಬ್ಲಾಕ್‌ನಲ್ಲಿ ವಾಸವಾಗಿರುವ ತಮ್ಮ ಸ್ನೇಹಿತ ಮತ್ತು ಹಿರಿಯ ನಾಗರಿಕ ತಪನ್ ಮುಖರ್ಜಿ ಅವರನ್ನು ಉಲ್ಲೇಖಿಸಿ, ಸುತ್ತಮುತ್ತ ಅಂಚೆ ಕಚೇರಿ ಇಲ್ಲದಿರುವ ತೊಂದರೆಗಳನ್ನು ವಿವರಿಸಿದರು. ನಾನು ಪೋಸ್ಟ್ ಮಾಸ್ಟರ್ ಜನರಲ್ ಕಚೇರಿಗೆ ಭೇಟಿ ನೀಡಿ ಡ್ಯಾಶ್ ಅವರನ್ನು ಭೇಟಿ ಮಾಡಿ ಕಲ್ಪನೆಯನ್ನು ವಿವರಿಸಿದೆನು. 19 ತಿಂಗಳೊಳಗೆ ನಮ್ಮ ಭಾಗದಲ್ಲಿ ಪೂರ್ಣ ಪ್ರಮಾಣದ ಅಂಚೆ ಕಚೇರಿ ತೆರೆಯಲು ನಿರ್ಧರಿಸಲಾಯಿತು ಎಂದು ಹೇಳಿದರು.
ಮೊದಲ ಅಂಚೆ ಕಚೇರಿ ಸದ್ಯದಲ್ಲಿಯೇ ತಲೆಯೆತ್ತಲಿದೆ. ನನ್ನ ನಿವಾಸದಿಂದ 1.5 ಕಿ.ಮೀ ದೂರದಲ್ಲಿರುತ್ತದೆ. ಅಷ್ಟು ದೂರ ಕ್ರಮಿಸಲು ಸಾಧ್ಯವಿದೆ. ಆಯ್ಕೆಮಾಡಿದ ಸ್ಥಳವು ವಾಣಿಜ್ಯ ಪ್ರದೇಶದಲ್ಲಿ ಬಾಡಿಗೆ ಸೌಲಭ್ಯವಾಗಿದೆ ಎಂದರು.
Advertisement