ಬೆಂಗಳೂರು: ಮೊಣಕಾಲು, ಸೊಂಟ ಕೀಲು ಬದಲಿ ಶಸ್ತ್ರಚಿಕಿತ್ಸೆಗಳು ಹಾಗೂ ಇನ್ನಿತರೇ ಕ್ಲಿಷ್ಟಕರ ಸಮಸ್ಯೆಗಳ ಕುರಿತು ನುರಿತ ವೈದ್ಯರಿಂದ ಎರಡನೇ ಅಭಿಪ್ರಾಯ ಪಡೆಯಲು ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಯೊಂದನ್ನು ರಾಜ್ಯ ಸರ್ಕಾರ ಮಂಗಳವಾರ ಆರಂಭಿಸಿದೆ.
ಆರೋಗ್ಯ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಕಾರ್ಯನಿರ್ವಹಿಸುವ 1800 4258 330 ಸಹಾಯವಾಣಿಯಿಂದ ರಾಜ್ಯದಲ್ಲಿ ಮೊಣಕಾಲು ಕೀಲು ಬದಲಿ, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳ ಕುರಿತು ತಜ್ಞ ವೈದ್ಯರಿಂದ ಸಲಹೆ ಪಡೆಯಬಹುದಾಗಿದೆ.
ಸಂಧಿವಾತ, ವಯಸ್ಸಿಗೆ ಸಂಬಂಧಿಸಿದ ಕಾರಣಗಳಿಂದ ಮೊಣಕಾಲು ಮತ್ತು ಸೊಂಟದ ಕೀಲು ಬದಲಿಗಳಂತಹ ಶಸ್ತ್ರಚಿಕಿತ್ಸೆಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಲಭ್ಯವಿರುವ ಅತ್ಯುತ್ತಮ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯನ್ನು ನಿರ್ಧರಿಸುವಲ್ಲಿ ರೋಗಿಗಳು ಸಾಮಾನ್ಯವಾಗಿ ಗೊಂದಲದ ಪರಿಸ್ಥಿತಿ ಎದುರಿಸುತ್ತಾರೆ.
ನೂತನ ಸಹಾಯವಾಣಿಗೆ ಇಂದು ಸಂಜೆ ಚಾಲನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದು ರಾಜ್ಯದಲ್ಲಿ ಆರೋಗ್ಯ ಸೇವೆ ಸುಧಾರಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬ ನಾಗರಿಕರು ಮೊಣಕಾಲು, ಸೊಂಟದ ಕೀಲು ಬದಲಿ ಸಮಸ್ಯೆಗಳ ಬಗ್ಗೆ ವೈದ್ಯಕೀಯ ಸಲಹೆ ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದರು.
ಸಹಾಯವಾಣಿಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಮಾಹಿತಿ ಪಡೆಯಬಹುದಾಗಿದೆ. ಯಾರೇ ಆದರೂ ತಜ್ಞ ಶಸ್ತ್ರಚಿಕಿತ್ಸಕರೊಂದಿಗೆ ಸಂಪರ್ಕ ಸಾಧಿಸಬಹುದು, ಪ್ರಶ್ನೆಗಳನ್ನು ಕೇಳಬಹುದು, ಶಸ್ತ್ರ ಚಿಕಿತ್ಸೆಗಳ ಕುರಿತು ಉಚಿತವಾಗಿ ಎರಡನೇ ಅಭಿಪ್ರಾಯ ಪಡೆಯಬಹುದು. ಸರ್ಜರಿ ಅವಶ್ಯಕತೆ ಇದೆಯೋ, ಇಲ್ಲವೋ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳು ಏನು? ಎಂಬುದರ ಬಗ್ಗೆ ಸಿಗಲಿದೆ ತಜ್ಞ ವೈದ್ಯರ ಸಲಹೆ ಪಡೆಯಬಹುದು ಎಂದರು.
ವಾಟ್ಸಾಪ್ ಮೂಲಕವೂ ತಜ್ಞ ವೈದ್ಯರಿಗೆ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ರೋಗ ನಿರ್ಣಯ ಮತ್ತು ಶಸ್ತ್ರಚಿಕಿತ್ಸೆಯ ಬಗೆಗಿನ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಶಸ್ತ್ರಚಿಕಿತ್ಸೆ ಒಳಪಡುವ ಅವಶ್ಯಕತೆ ಅಥವಾ ಇತರೆ ಯಾವುದೇ ಗೊಂದಲ, ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು..ರೋಗ ಮತ್ತು ಚಿಕಿತ್ಸೆ, ಶಸ್ತ್ರಚಿಕಿತ್ಸಾ ಆಯ್ಕೆಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಬಹುದು. ಯೋಜನೆಯಲ್ಲಿ ಮೊಣಕಾಲು ಮತ್ತು ಸೊಂಟ (Hip) ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಸಾಕ್ಷ್ಯ ಆಧಾರಿತ ಮಾರ್ಗದರ್ಶನವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement