ಉಡುಪಿ: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷನಾಗಿ ಹೇಳುತ್ತಿದ್ದೇನೆ ನಮ್ಮ ಸರಕಾರ ಮತ್ತು ಪಕ್ಷವು ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಈಗಾಗಲೇ ರದ್ದಾದ ಬಿಪಿಎಲ್ ಕಾರ್ಡ್‌ಗಳ ಪಟ್ಟಿಯನ್ನು ಸಲ್ಲಿಸುವಂತೆ ಸಚಿವರಿಗೆ ಸೂಚನೆ ನೀಡಲಾಗಿದೆ. ಆ ಪಟ್ಟಿಯಲ್ಲಿ ಅರ್ಹ ಕುಟುಂಬಗಳಿವೆಯೇ ಎಂದು ಪರಿಶೀಲಿಸುವಂತೆಯೂ ತಿಳಿಸಿದ್ದೇವೆ. ಇದಲ್ಲದೆ, ಪ್ರತಿ ತಾಲೂಕಿನಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಸಮಿತಿಗಳನ್ನು ರಚಿಸಲಾಗಿದೆ. ಕಾಂಗ್ರೆಸ್ ಮತ್ತು ಸರ್ಕಾರ ಈ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ನಕ್ಸಲ್ ಮುಖಂಡನ ಎನ್‌ಕೌಂಟರ್ ಕುರಿತು ಮಾತನಾಡಿ, ಪೊಲೀಸರು ಅವರ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಲಿದ್ದು, ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಜನರಿಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ. ಕೇರಳ ಮತ್ತು ಕರ್ನಾಟಕದಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಕರ್ನಾಟಕಕ್ಕೆ ನಬಾರ್ಡ್ ಸಾಲ ಕಡಿತದ ಕುರಿತು ಮಾತನಾಡಿ, ಪ್ರಸ್ತುತ ಸಿಎಂ ದೆಹಲಿಯಲ್ಲಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲು ಸಿಎಂ ಸಮಯ ಕೋರಿದ್ದು, ಪರಿಹಾರ ಕಂಡುಕೊಳ್ಳಲಿದ್ದಾರೆಂದು ತಿಳಿಸಿದರು
Advertisement