ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ಇಷ್ಟು ದಿನ ಅದಾನಿ ಅವರನ್ನು ರಕ್ಷಣೆ ಮಾಡಿಕೊಂಡು ಬಂದಿದ್ದು, ಈಗಲಾದರೂ ದೇಶದ ಗೌರವ ಉಳಿಸಲು ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶುಕ್ರವಾರ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕಳೆದ 7-8 ವರ್ಷಗಳಿಂದ ನಿರಂತರವಾಗಿ ಅದಾನಿ ಅವರ ಕಂಪನಿಗಳ ಬಗ್ಗೆ ಆರೋಪ ಮಾಡಿ ಜನರ ಗಮನ ಸೆಳೆಯುತ್ತಿದ್ದರು. ಕೇಂದ್ರ ತನಿಖಾ ಸಂಸ್ಥೆಗಳು ಈ ವಿಚಾರವಾಗಿ ಕ್ರಮ ಕೈಗೊಂಡಿಲ್ಲ. ಈ ವಿಚಾರ ಸಂಸತ್ತಿನಿಂದ ಬೀದಿಗಳ ವರೆಗೂ ಚರ್ಚೆಯಾಯಿತು. ಇದೀಗ ಗ್ರೀನ್ ಎನರ್ಜಿ ಯೋಜನೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಅಮೆರಿಕಾ ನ್ಯಾಯಾಲಯ ಆದೇಶ ನೀಡಿದ್ದು, ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರಲ್ಲಿ ಭಾಗಿಯಾದವರನ್ನು ಕಾನೂನು ಚೌಕಟ್ಟಿನಲ್ಲಿ ತರಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಸೇರಿದಂತೆ ವಿರೋಧ ಪಕ್ಷಗಳ ನಾಯಕರುಗಳನ್ನು ಬಂಧಿಸುವ ಕೇಂದ್ರ ಸರ್ಕಾರ ಇದೀಗ ಅದಾನಿ ಅವರನ್ನು ಬಂಧಿಸಿ ದೇಶದ ಮರ್ಯಾದೆ ಉಳಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಅದಾನಿ ಅವರ ರಕ್ಷಣೆ ಮಾಡಿ ಪ್ರಯೋಜನವಿಲ್ಲ. ದೇಶದ ಜನಸಾಮಾನ್ಯರು ಅವರ ಕಂಪನಿಗಳ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದ್ದು, ಅವರ ಕಂಪನಿ ಷೇರು ಬಿದ್ದು ಹೋಗುತ್ತಿದೆ. ಕೇಂದ್ರ ಸರ್ಕಾರ ಇವರ ರಕ್ಷಣೆ ಮಾಡಬೇಕೆಂದು ಕೋರಿದರು.
ಇದೇ ವೇಳೆ ರಾಜ್ಯದಲ್ಲಿರುವ ಅದಾನಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ತಾಕತ್ತು ರಾಜ್ಯ ಸರ್ಕಾರಕ್ಕೆ ಇದೆಯೇ’ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅದಾನಿ ವಿರುದ್ಧ ಕೇಂದ್ರ ಸರ್ಕಾರ ತನಿಖೆ ಆರಂಭಿಸಿ, ಮೊದಲು ಕ್ರಮ ಕೈಗೊಳ್ಳಲಿ’ ಎಂದರು.
ಕೇಂದ್ರ ಸರ್ಕಾರ ಮೊದಲು ತನಿಖೆ ಆರಂಭಿಸಿ, ತಮ್ಮ ಕರ್ತವ್ಯ ಮಾಡಲಿ. ನಂತರ ನಮ್ಮ ರಾಜ್ಯ ಸರ್ಕಾರಕ್ಕೆ ಈ ವಿಚಾರವಾಗಿ ಪತ್ರ ಬರೆದರೆ ನಮ್ಮ ಸರ್ಕಾರ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲಿದೆ. ಇಷ್ಟು ದಿನ ಅವರು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಈಗ ಕ್ರಮ ಕೈಗೊಳ್ಳಲು ಮುಂದಾಗಲಿ ಎಂದು ಹೇಳಿದರು
Advertisement