ಬೆಂಗಳೂರು: ಲಂಚ ಪ್ರಕರಣದಲ್ಲಿ ಅಮೆರಿಕಾದಿಂದ ಬಂಧನದ ವಾರೆಂಟ್ ಪಡೆದಿರುವ ಉದ್ಯಮಿ ಅದಾನಿ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅದಾನಿ ಅವರನ್ನು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದ ಖರ್ಗೆ, ಈ ವಿಷಯವನ್ನು ನಾವು ಪಾರ್ಲಿಮೆಂಟ್‌ನಲ್ಲಿ ಎತ್ತುತ್ತೇವೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಅಮಿತ್ ಶಾ ಅವರೇ ಗೃಹ ಸಚಿವರಾಗಿದ್ದು, ಅವರ ಬಳಿ ಇಡಿ, ಸಿಬಿಐ ಇದೆ. ಇದೆಲ್ಲ ಇದ್ದರೂ ತನಿಖೆಯನ್ನು ಮಾಡಲ್ಲ. ಹಿಂದೆ ಈ ವಿಚಾರ ಎತ್ತಿದಾಗ ಅದು ಫಾರಿನ್‌ನಲ್ಲಿದೆ ಸುಳ್ಳು ಅಂತೆಲ್ಲ ಹೇಳಿದ್ದರು. ಇವರು ಹಿಂಡನ್‌ಬರ್ಗ್ ವರದಿ ಬಗ್ಗೆಯೂ ನಕರಾತ್ಮಕವಾಗಿ ಮಾತನಾಡಿದರು. ನಾವು ಹೇಳೋದು ಇಲ್ಲಿ ಹೇಳಿಯೇ ಹೇಳುತ್ತೇವೆ. ಎಲ್ಲಾವೂ ಸರ್ಕಾರಕ್ಕೆ ಗೊತ್ತಿದೆ. ಹೀಗಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಕೂಡಲೇ ಭಾರತದಲ್ಲಿರುವ ಅದಾನಿ ಅವರನ್ನು ಕೂಡಲೇ ಬಂಧಿಸಬೇಕು ಎಂದರು.
ಅದಾನಿ ಬಗ್ಗೆ ವಿದೇಶದಲ್ಲೂ ಭ್ರಷ್ಟಾಚಾರದ ವಿಚಾರ ಹೊರಗೆ ಬರುತ್ತಿದೆ. ಒಂದು ವೇಳೆ ಆರೋಪ ಸುಳ್ಳಾದರೆ, ಮಾನ ಹಾನಿ ಕೇಸ್ ಹಾಕಲಿ. ನಾವು ರಾಜಕೀಯವಾಗಿ ಮಾತನಾಡುತ್ತೇವೆ ಅಂತ ನೀವು ಹೇಳಬಹುದು. ಆದರೆ, ಎಲ್ಲಾರೂ ಹಿಂಡನ್ ಬರ್ಗ್ ಬಗ್ಗೆ ಹೇಳುತ್ತಿದ್ದಾರೆ. ನಮಗೆ ಇರುವ ಕಳಕಳಿ ಏನೆಂದರೆ ನಮ್ಮ ದೇಶದ ಆಸ್ತಿಯನ್ನು ಅವರಿಗೆ ಕೊಡುತ್ತಿದ್ದೇವೆ. ವಿಮಾನ ನಿಲ್ದಾಣ, ಬಂದರು, ಸಾರ್ವಜನಿಕ ಸಂಸ್ಥೆಗಳು, ಸರ್ಕಾರಿ ಜಾಗಗಳನ್ನು ಅವರಿಗೆ ಕೊಡುತ್ತಿದ್ದೇವೆ. ನ್ಯಾಯವಾಗಿ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಸಾರ್ವಜನಿಕ ಬ್ಯಾಂಕ್ ಗಳಿಂದ ಪಡೆದ ಕೋಟ್ಯಂತ ರೂ. ಸಾಲದಿಂದ ಸರ್ಕಾರದ ಭೂಮಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅದಾನಿ ಈ ರೀತಿ ಎಲ್ಲಾ ಮಾಡುತ್ತಿದ್ದರೆ ಸರ್ಕಾರದಿಂದ ಸಂಪೂರ್ಣ ರಕ್ಷಣೆ ನೀಡಲಾಗುತ್ತಿದೆ.ಅವರ ಮುಖಾಂತರ ಸರ್ಕಾರ ಕೂಡ ಸಹಾಯ ಪಡೆದುಕೊಳ್ಳುತ್ತಿದೆ. ಅವರ ಪಕ್ಷಕ್ಕೂ ಸಹಾಯ ಪಡೆದುಕೊಳ್ಳುತ್ತಿದ್ದಾರೆ ಅನಿಸುತ್ತದೆ ಎಂದು ಹೇಳಿದರು.
ಮೋದಿ ಹೊರಗಡೆ ಬಹಳ ನ್ಯಾಯ ಸ್ವಚ್ಛ ಅಂತ ಭಾಷಣ ಮಾಡುತ್ತಾರೆ. ನಿಮ್ಮ ನಡವಳಕೆ ಕೂಡ ಸ್ವಚ್ಛವಾಗಿ ಇರಬೇಕು. ಎಲ್ಲಾ ಹೂಡಿಕೆ ತಮಗೆ ಬೇಕಾದ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಆಲ್ ಇಂಡಿಯಾ ಡೆವಲಪ್ಮೆಂಟ್ ಆಗಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರವರಿಗೆ ಏಳಿಗೆ ಆಗುತ್ತಾ? ಒಬ್ಬರಿಂದ ಸಣ್ಣಪುಟ್ಟ ಉದ್ಯಮಗಳಿಗೆ ನಷ್ಟ ಆಗುತ್ತಿದೆ. ಕ್ವಿಕ್ ಮಿಲಿಯನರ್ ಬಿಲಿಯನೇರ್ ಆಗಬೇಕು ಅಂತ ಇದೆಲ್ಲಾ ಕ್ರಿಯೇಟ್ ಮಾಡ್ತಿದ್ದಾರೆ. ಅದಾನಿ ಕೆಲಸಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
Advertisement