ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಹೇರ್ ಡ್ರೈಯರ್ ಸ್ಫೋಟ ಪ್ರಕರಣ ಕ್ವಾರಿ ಕಾರ್ಮಿಕನೊಬ್ಬನ ಸಂಚು ಎಂದು ತನಿಖೆ ವೇಳೆ ಬಹಿರಂಗವಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಹೇರ್ ಡ್ರೈಯರ್ ಸ್ಫೋಟಿಸಿರುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದ್ದು, ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಕ್ವಾರಿ ಕೆಲಸಗಾರ ಸಿದ್ದಪ್ಪ ಶೀಲವಂತ (35) ಬಂಧಿತ ಆರೋಪಿ. ನವೆಂಬರ್ 15 ರಂದು ಶಶಿಕಲಾ ಕೊಲೆ ಮಾಡಲು ಸಂಚು ರೂಪಿಸಿದ್ದನು, ಆರೋಪಿ ಸಿದ್ದಪ್ಪ ಹಾಗೂ ಬಸವ್ವ ರಾಜೇಶ್ವರಿ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ಅಕ್ರಮ ಸಂಬಂಧ ವಿಚಾರಕ್ಕೆ ಬಸಮ್ಮನ ಸ್ನೇಹಿತೆ ಶಶಿಕಲಾ ಎಂಬವರು ತಕರಾರು ಮಾಡಿದ್ದರು. ಹೀಗಾಗಿ ಬಸಮ್ಮ ಆರೋಪಿಯಿಂದ ದೂರಾಗಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಯು ಶಶಿಕಲಾ ಅವರ ಕೊಲೆಗೆ ಸಂಚು ರೂಪಿಸಿದ್ದ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿ ತಾನೇ ಹೇರ್ ಡ್ರೈಯರ್ ಖರೀದಿಸಿ, ಹೇರ್ ಡ್ರೈಯರ್ ಸ್ಫೋಟಿಸಲು ಅದರೊಳಗೆ ಡೆಟೊನೇಟರ್ ಬಳಸಿ ಶಶಿಕಲಾ ಅವರ ವಿಳಾಸಕ್ಕೆ ಕಳುಹಿಸಿದ್ದಾನೆ. ಆದರೆ ಊರಲ್ಲಿ ಇರದ ಶಶಿಕಲಾ ಅವರು ತನ್ನ ಸ್ನೇಹಿತೆ ಬಸಮ್ಮ ಅವರ ಬಳಿ ಹೇರ್ ಡ್ರೈಯರ್ ಪಡೆಯುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಸ್ನೇಹಿತೆ ಶಶಿಕಲಾ ಮಾಹಿತಿಯಂತೆ ಡಿಟಿಡಿಸಿ ಕೋರಿಯರ್ ಸೆಂಟರ್ ಗೆ ತೆರಳಿ ಬಸಮ್ಮ ಹೇರ್ ಡ್ರೈಯರ್ ಪಡೆದು ಮನೆಗೆ ಮರಳಿದ ಬಸಮ್ಮ ಹೇರ್ ಡ್ರೈಯರ್ ಆನ್ ಮಾಡಿದ್ದಾರೆ. ಹೇರ್ ಡ್ರೈಯರ್ ಆನ್ ಮಾಡುತ್ತಿದ್ದಂತೆ ಅದು ಸ್ಫೋಟಗೊಂಡು ಅವರ ಕೈಗಳಿಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದುಬಂದಿದೆ.
Advertisement