ಹುಬ್ಬಳ್ಳಿ: 2008ರಿಂದಲೂ ಬಿಜೆಪಿ ಭದ್ರಕೋಟೆಯಾಗಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ.
1994 ರಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ ಗೆದ್ದಿತ್ತು. ಈ ಬಾರಿಯ ಉಪಚುನಾವಣೆಯಲ್ಲಿ ಯಾಸಿರ್ ಅಹಮದ್ ಖಾನ್ ಪಠಾಣ್ ಅವರು ಹಾವೇರಿ ಸಂಸದ ಮತ್ತು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರನ್ನು 13,448 ಮತಗಳಿಂದ ಸೋಲಿಸಿದ್ದಾರೆ. ಪಠಾಣ್ ಅವರು 1,00,756 ಮತಗಳನ್ನು (52.41%) ಪಡೆದರೆ, ಭರತ್ 87,308 ಮತಗಳನ್ನು (45.41%) ಪಡೆದಿದ್ದಾರೆ. ಉಪಚುನಾವಣೆಯ ಈ ಸೋಲು ಬಿಜೆಪಿಗೆ ಮುಖ್ಯವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಆಘಾತ ತಂದಿದೆ.
ಜಿಲ್ಲೆಯಲ್ಲಿರುವ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಚುನಾವಣೆಯಲ್ಲಿ 5 ಕಡೆ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಶಿಗ್ಗಾಂವಿಯಲ್ಲಿ ಬಿಜೆಪಿಯ ಬೊಮ್ಮಾಯಿ ಗೆದ್ದಿದ್ದರು. ಈಗ ಜಿಲ್ಲೆಯ ಎಲ್ಲಾ ಕ್ಷೇತ್ರಗಳೂ ಕಾಂಗ್ರೆಸ್ ಪಾಲಾಕಿದೆ.
ಮೇ ತಿಂಗಳಲ್ಲಿ ಹಾವೇರಿಯಿಂದ ಲೋಕಸಭೆಗೆ ಬಸವರಾಜ ಬೊಮ್ಮಾಯಿ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿತ್ತು. ಶಿಗ್ಗಾಂವಿ ಕ್ಷೇತ್ರದಲ್ಲಿನ ಗೆಲುವು ಕಾಂಗ್ರೆಸ್‌ನವರಿಗೂ ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್ ಲೋಕಸಭೆ ಚುನಾವಣೆಯಿಂದಲೇ ಕ್ಷೇತ್ರದಲ್ಲಿ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿತ್ತು. ಧಾರವಾಡ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ವಿರುದ್ಧ 8,500 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. ಹೀಗಾಗಿ ಸೋತರೂ ಕಾಂಗ್ರೆಸ್ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ. ಸಂಸದರಾಗಿ ಬೊಮ್ಮಾಯಿಯವರು ಆಯ್ಕೆಯಾದ ಬಳಿಕ ಉಪಚುನಾವಣೆಗೆ ಸಿದ್ದತೆ ಆರಂಭಿಸಲಿದ್ದ ಕೈ ಪಡೆ ಕ್ಷೇತ್ರದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಕಾರಣ, ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ನಿರ್ಧರಿಸಿತ್ತು. ಇದಕ್ಕಾಗಿ ಸರ್ಕಾರದ 8 ಸಚಿವರನ್ನು ಪ್ರಚಾರಕ್ಕೆ ನಿಯೋಜನೆಗೊಳಿಸಿತ್ತು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕ್ಷೇತ್ರದಲ್ಲಿ 3 ದಿನಗಳ ಕಾಲ ವ್ಯಾಪಕ ಪ್ರಚಾರ ನಡೆಸಿದ್ದರು. ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಡಿಕೆ.ಶಿವಕುಮಾರ್ ಕೂಡ ಸರಣಿ ರ್ಯಾಲಿ ಹಾಗೂ ಕಾರ್ಯಕರ್ತರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಈ ಮೂಲಕ ವಕ್ಫ್ ವಿವಾದ ಬಳಸಿಕೊಂಡು ಮತದಾರರ ಸೆಳೆಯಲು ಮುಂದಾಗಿದ್ದ ಬಿಜೆಪಿ ಯತ್ನವನ್ನು ವಿಫಲಗೊಳ್ಳುವಂತೆ ಮಾಡಿದ್ದರು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಬೊಮ್ಮಾಯಿಗೆ ಮತ ಹಾಕಿದ್ದ ಮುಸ್ಲಿಮರ ಒಂದು ವಿಭಾಗವು ತಮ್ಮ ನಿಷ್ಠೆಯನ್ನು ಬದಲಿಸಿ ಪಠಾಣ್ ಅವರಿಗೆ ಮತ ಹಾಕಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರ ಅಹಿಂದ ಅಂಶವೂ ಪಠಾಣ್ ಅವರಿಗೆ ಒಂದು ಮಟ್ಟಕ್ಕೆ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
ಗೆಲುವು ಬಳಿಕ ಪ್ರತಿಕ್ರಿಯೆ ನೀಡಿರುವ ಪಠಾಣ್ ಅವರು, ತಮ್ಮ ಯಶಸ್ಸಿಗೆ ಕಾಂಗ್ರೆಸ್ ನಾಯಕರು, ಮುಖ್ಯವಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕಾರಣ ಎಂದು ಹೇಳಿದ್ದಾರೆ. ಅಲ್ಲದೆ, ಕ್ಷೇತ್ರದ ಜನರ ನಿರೀಕ್ಷೆಯಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಭರತ್ ಬೊಮ್ಮಾಯಿಯವರು ಪ್ರತಿಕ್ರಿಯಿಸಿ ಬಿಜೆಪಿಯ ಹಿರಿಯ ನಾಯಕರ ಜತೆ ಚರ್ಚೆ ನಡೆಸಿ ಆತ್ಮಾವಲೋಕನ ಮಾಡಿಕೊಂಡು ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ, ಜನರ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುವುದಾಗಿ ತಿಳಿಸಿದ ಬಸವರಾಜ ಬೊಮ್ಮಾಯಿ, ಪಠಾಣ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿಯೂ ನಿಲ್ಲದಿರಲಿ ಎಂದು ಹಾರೈಸಿದ್ದು, ಹಣಬಲ ಬಳಸಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ಆರೋಪಿಸಿದ್ದಾರೆ.
Advertisement