ಬೆಂಗಳೂರು: ರಾಜ್ಯ ಭೋವಿ ನಿಗಮ ಹಗರಣದ ತನಿಖೆ ಎದುರಿಸಿದಾಗ ಪೊಲೀಸ್ ಅಧಿಕಾರಿ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ವಕೀಲೆಯೊಬ್ಬರ ಡೆತ್ ನೋಟ್ ಆರೋಪದ ನಂತರ ಡಿವೈಎಸ್ ಪಿ ಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ಲೇಔಟ್ ನ ಮನೆಯಲ್ಲಿ ನವೆಂಬರ್ 22 ರಂದು ಆತ್ಮಹತ್ಯೆಗೆ ಶರಣಾಗಿದ್ದ ವಕೀಲೆ ಜೀವಾ ಬರೆದಿಟ್ಟಿದ್ದ ಡೆತ್ ನೋಟ್ ಆಧಾರದ ಮೇಲೆ ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮಿ ವಿರುದ್ಧ ಬನಶಂಕರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಎಫ್ ಐಆರ್ ದಾಖಲಾದ ನಂತರ ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಸಿಸಿಬಿಯಿಂದ ತನಿಖೆಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಆದೇಶಿಸಿದ್ದಾರೆ.
ಏನಿದು ಹಗರಣ:ಭೋವಿ ಅಭಿವೃದ್ಧಿ ನಿಗಮದಲ್ಲಿ ಸಾಲ ಕೊಡಿಸುವುದಾಗಿ ಮಹಿಳೆಯರು ಸೇರಿದಂತೆ ಹಲವರಿಂದ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಕೆ.ಎನ್. ಸೂರ್ಯ ಕಲಾವತಿ ಎಂಬುವರು ಮಾರ್ಚ್ 18, 2023 ರಲ್ಲಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2021ರ ಅಕ್ಟೋಬರ್ ನಲ್ಲಿ ತನ್ನನ್ನು ಸಂಪರ್ಕಿಸಿದ ಸರಸ್ವತಿ ಮತ್ತು ಲಕ್ಷ್ಮಿ ಎಂಬುವರು ಭೋವಿ ಅಭಿವೃದ್ಧಿ ನಿಗಮದಿಂದ ಸಾಲ ಪಡೆಯಬಹುದಾಗಿದೆ. ಸಾಲ ತೀರಿದಾಗ ಲಂಚವಾಗಿ ರೂ. 25,000 ನೀಡುವಂತೆ ಹೇಳಿದ್ದರು. ಅದರಂತೆ ಸೂರ್ಯಕಲಾವತಿ ಅಗತ್ಯ ದಾಖಲೆಗಳು ಮತ್ತು ಎರಡು ಖಾಲಿ ಚೆಕ್‌ಗಳನ್ನು ಸಲ್ಲಿಸಿದರು ಮತ್ತು ಖಾಲಿ ಕಾಗದಗಳಿಗೆ ಸಹಿ ಹಾಕಿದ್ದರು.
ಸರಸ್ವತಿ ಮತ್ತು ಲಕ್ಷ್ಮಿಯವರು ಸಂಪರ್ಕಿಸಿದ 40 ಮಹಿಳೆಯರಲ್ಲಿ ಸೂರ್ಯಕಲಾವತಿ ಒಬ್ಬರು. ಒಂದು ತಿಂಗಳ ನಂತರ 50,000 ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಒಪ್ಪಂದದಂತೆ 25,000 ರೂ.ಗಳನ್ನು ಅವರ ಖಾತೆಯಿಂದ ಹಿಂಪಡೆಯಲಾಗಿದೆ ಎಂದು ಆರೋಪಿತ ಮಹಿಳೆಯರು ಸೂರ್ಯಕಲಾವತಿ ಅವರಿಗೆ ಹೇಳಿದ್ದಾರೆ.
ಡಿಸೆಂಬರ್ 2022 ರಲ್ಲಿ, ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದು, ಅವರು ತೆಗೆದುಕೊಂಡಿರುವ 5 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಬೇಕೆಂದು ಹೇಳಿದ್ದಾರೆ. ಇದನ್ನು ತಿಳಿದು ಬೆಚ್ಚಿಬಿದ್ದ ಆಕೆ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಭೋವಿ ಅಭಿವೃದ್ಧಿ ನಿಗಮದಿಂದ ರೂ.5 ಲಕ್ಷ ಮಂಜೂರು ಆಗಿರುವುದು ತಿಳಿದುಬಂದಿದೆ.
ರೂ.5 ಲಕ್ಷದ ಹಣದಲ್ಲಿ 4,75,000 ರೂ.ಗಳನ್ನು ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್‌ಗೆ ವರ್ಗಾಯಿಸಲಾಗಿದೆ. ಆಕೆಯ ದೂರಿನ ಆಧಾರದ ಮೇಲೆ ಸಿಐಡಿ ತನಿಖೆ ಆರಂಭಿಸಿತ್ತು. ತನಿಖೆಯ ಸಂದರ್ಭದಲ್ಲಿ, ಹಲವಾರು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ವಕೀಲೆ ಜೀವಾ ಕೂಡಾ ಒಬ್ಬರಾಗಿದ್ದರು. ಆಕೆಯನ್ನು ವಿಚಾರಣೆಗಾಗಿ ಕರೆಸಲಾಗಿತ್ತು ಎನ್ನಲಾಗಿದೆ.
Advertisement