ಬೆಂಗಳೂರು: ಆ್ಯಂಟಿಬಯೋಟಿಕ್ ಸೂಕ್ತ ಬಳಕೆ ಮತ್ತು ನಿಯಂತ್ರಣಕ್ಕೆ ಹೊಸ ನೀತಿಯ ಅಗತ್ಯವಿದೆ ಎಂದು ಸಂಸದ ಡಾ.ಸಿ .ಎನ್.ಮಂಜುನಾಥ್ ಅವರು ಭಾನುವಾರ ಹೇಳಿದರು.
ನಗರದಲ್ಲಿ ಆಯೋಜಿಸಲಾಗಿದ್ದ 7ನೇ ರಾಷ್ಟ್ರೀಯ ಮಟ್ಟದ ಫೀವರ್ಕಾನ್-2024 ಸಮಾವೇಶದಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ಕಾಯಿಲೆಗಳಿಗೂ ಆ್ಯಂಟಿಬಯೋಟಿಕ್‌ಗಳ ಬಳಕೆ ಮಾಡಲಾಗುತ್ತಿದೆ. ಇವುಗಳ ದುರುಪಯೋಗ ಹೆಚ್ಚಾಗುತ್ತಿದ್ದು, ಆ್ಯಂಟಿಮೈಕ್ರೊಬಿಯಲ್ ಪ್ರತಿರೋಧ ಹೆಚ್ಚುತ್ತಿದೆ, ಹೀಗಾಗಿ ಆ್ಯಂಟಿಬಯೋಟಿಕ್ ಸೂಕ್ತ ಬಳಕೆ ಮತ್ತು ನಿಯಂತ್ರಣಕ್ಕೆ ಹೊಸ ನೀತಿಯ ಅಗತ್ಯವಿದೆ ಎಂದು ಹೇಳಿದರು.
ಹಲವು ಆರೋಗ್ಯ ಸಮಸ್ಯೆಗಳ ಮೊದಲ ಲಕ್ಷಣವೆಂದರೆ ಜ್ವರ, ಇದರ ರೋಗನಿರ್ಣಯವು ಪ್ರಮುಖ ಅಂಶವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ರೋಗಗಳನ್ನು ತ್ವರಿತವಾಗಿ ಗುಣಪಡಿಸುವ ಆತುರದಲ್ಲಿ ಆ್ಯಂಟಿಬಯೋಟಿಕ್‌ಗಳನ್ನು ಅತಿಯಾದ ಬಳಕೆ ಮಾಡಲಾಗುತ್ತಿದೆ. ಕೇವಲ ಆರೋಗ್ಯ ರಕ್ಷಣೆಯಲ್ಲಿ ಮಾತ್ರವಲ್ಲದೆ ಕೃಷಿಯಲ್ಲಿಯೂ ವ್ಯಾಪಕವಾಗಿದೆ. ಪ್ರತಿಜೀವಕಗಳು ಒಂದು ವರವಾಗಿದ್ದರೂ, ಅತಿಯಾದ ಬಳಕೆಯು ಆ್ಯಂಟಿಮೈಕ್ರೊಬಿಯಲ್ ಪ್ರತಿರೋಧದ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಆ್ಯಂಟಿಬಯೋಟಿಕ್ ಅಮೃತವೂ ಹೌದು. ಅತಿಯಾದರೆ ವಿಷವೂ ಹೌದು. ಹೀಗಾಗಿ ಇದನ್ನು ಅತಿಯಾಗಿ ಬಳಸಬಾರದು. ಈ ಬಗ್ಗೆ ತಕ್ಷಣ ಗಮನ ಹರಿಸಿ, ನಿಯಂತ್ರಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ರೋಗಿಗಳ ಆರೈಕೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಬಹಳಷ್ಟು ಅರೋಗ್ಯ ಸಮಸ್ಯೆಗಳ ಪ್ರಥಮ ಲಕ್ಷಣ ಜ್ವರ. ಇದನ್ನ ಸೂಕ್ತವಾಗಿ ಪರಿಶೀಲನೆ ಮಾಡುವುದು ಅಗತ್ಯ. ತಂತ್ರಜ್ಞಾನ ಮುಂದುವರೆದಂತೆ ವೈದ್ಯರು, ರೋಗಿಗಳ ಮಾಹಿತಿ ಪರಿಶೀಲಿಸಿ ಚಿಕಿತ್ಸೆ ಪ್ರಾರಂಭಿಸುತ್ತಾರೆ. ರೋಗಿಯನ್ನು ಮುಟ್ಟಿ ಆರೋಗ್ಯ ಪರಿಶೀಲಿಸಿದರೆ ಬಹಳಷ್ಟು ವಿಷಯ ತಿಳಿಯಬಹುದು. ಆದರೆ, ಇದೀಗ ಚಿಕಿತ್ಸಾ ವಿಧಾನವೇ ಬದಲಾಗುತ್ತಿದೆ ಎಂದು ತಿಳಿಸಿದರು.
Advertisement