ಬೆಂಗಳೂರು: ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಎಚ್ಎಸ್ಬಿಸಿ ಬ್ಯಾಂಕ್ ಶಾಖೆಗೆ ಬಾಂಬ್ ಬೆದರಿಕೆ ಬಂದಿದೆ.
ಬ್ಯಾಂಕ್ನಲ್ಲಿ ಬಾಂಬ್ ಇಡಲಾಗಿದೆ ಎಂದು ಬರೆದಿರುವ ಇಮೇಲ್ವೊಂದನ್ನು ಬ್ಯಾಂಕ್ಗೆ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಕಚೇರಿಯ ಎಲ್ಲಾ ಸಿಬ್ಬಂದಿ ಹಾಗೂ ಗ್ರಾಹಕರನ್ನು ಹೊರ ಕಳುಹಿಸಲಾಗಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಹಲಸೂರು ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಇಮೇಲ್ ಕಳುಹಿಸಿದ ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಏರ್ಪೋರ್ಟ್, ವಿಮಾನದಲ್ಲಿ, ರೈಲು ನಿಲ್ದಾಣ, ಶಾಲೆ, ಕಾಲೇಜು, ಬ್ಯಾಂಕು ಇತ್ಯಾದಿ ಜನಸಂದಣಿ ಇರುವ ಸ್ಥಳಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿದ್ದು, ಬೆಂಗಳೂರಿನಲ್ಲೂ ಕೆಲ ತಿಂಗಳುಗಳಿಂದ ಈ ರೀತಿ ಹುಸಿ ಬಾಂಬ್ ಬೆದರಿಕೆ ಕರೆಗಳು, ಮೆಸೇಜ್ಗಳು ಬಂದಿವೆ.
Advertisement