ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಡಿ.10 ರಂದು ಬೆಳಗಾವಿಯ ಸುವರ್ಣಸೌಧದ ಹೊರಗೆ ಪ್ರತಿಭಟನೆ ನಡೆಸಲಾಗುವುದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಂಗಳವಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣಸೌಧದ ಎದುರು ಲಕ್ಷಾಂತರ ಪಂಚಮಸಾಲಿಗಳು ಅನೇಕ ವಕೀಲರ ನೇತೃತ್ವದಲ್ಲಿ ಜಮಾಯಿಸಿ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆಂದು ಹೇಳಿದರು.
ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿಗಳು 2013ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಪಂಚಮಸಾಲಿಗಳು ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇತ್ತೀಚೆಗೆ ಪಂಚಮಸಾಲಿ ಮುಖಂಡರ ಜೊತೆ ಸಿದ್ದರಾಮಯ್ಯ ಚರ್ಚಿಸಿದರೂ ಅವರ ಮನವಿಗೆ ಸ್ಪಂದಿಸಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪಂಚಮಸಾಲಿಗಳು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಇದೇ ವೇಳೆ ಬೆಳಗಾವಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ರಾಜ್ಯ ಸರ್ಕಾರ ಅಡ್ಡಿಪಡಿಸುವಂತಿಲ್ಲ. ಅಡ್ಡಿಪಡಿಸಿದ್ದೇ ಆದರೆ, ಪ್ರತಿಭಟನೆ ವಿಕೋಪಕಕೆ ಹೋಗಲಿದೆ ಎಚ್ಚರಿಸಿದರು. ಅಲ್ಲದೆ, ಪ್ರತಿಭಟನೆಗಾಗಿ ಸುವರ್ಣಸೌಧದ ಬಳಿ 5,000 ಟ್ರ್ಯಾಕ್ಟರ್‌ಗಳನ್ನು ತರಲಾಗುವುದು ಎಂದು ಹೇಳಿದರು.
Advertisement