ಬೆಂಗಳೂರಿನಲ್ಲಿ ಅಸ್ಸಾಂ ಯುವತಿ ಹತ್ಯೆ: ಪರಾರಿಯಾಗಿದ್ದ ಪ್ರಿಯಕರನ ಬಂಧನ
ಬೆಂಗಳೂರು: ಬೆಂಗಳೂರಿನ ಇಂದಿರಾ ನಗರದ ಸರ್ವಿಸ್ ಅಪಾರ್ಟ್ ಮೆಂಟ್ನಲ್ಲಿ ಅಸ್ಸಾಂ ಮೂಲದ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಪ್ರಿಯಕರನನ್ನು ಮೂರು ದಿನಗಳ ನಂತರ ಬೆಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಅಸ್ಸಾಂನ ಮಾಯಾ ಗೊಗೊಯ್(19) ಅವರನ್ನು ಆಕೆಯ ಪ್ರಿಯಕರ ಕೇರಳದ ಕಣ್ಣೂರು ಮೂಲದ ಆರವ್ ಹನೋಯ್ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಾವು ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಆತನನ್ನು ಬೆಂಗಳೂರಿಗೆ ಕರೆತರಲಾಗಿದೆ. ನಾವು ಪ್ರಸ್ತುತ ಆತನನ್ನು ವಿಚಾರಣೆ ನಡೆಸುತ್ತಿದ್ದೇವೆ" ಎಂದು ಉಪ ಪೊಲೀಸ್ ಆಯುಕ್ತ(ಪೂರ್ವ) ಡಿ ದೇವರಾಜ ಅವರು ಹೇಳಿದ್ದಾರೆ. ಆದರೆ, ಆರೋಪಿಯನ್ನು ಎಲ್ಲಿ ಬಂಧಿಸಲಾಗಿದೆ ಎಂಬುದನ್ನು ಅಧಿಕಾರಿ ಬಹಿರಂಗಪಡಿಸಿಲ್ಲ.
ಪೊಲೀಸರ ಪ್ರಕಾರ, ಮಾಯಾ ಗೊಗೊಯ್ ಕಳೆದ ಮಂಗಳವಾರ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಕೊಲೆಯಾಗಿದ್ದು, ಆಕೆಯ ದೇಹವು ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಿದ್ದ ಮಾಯಾ ಗೊಗೋಯಿ, ನವೆಂಬರ್ 23ರಂದು ತನ್ನ ಪ್ರಿಯಕರ ಆರವ್ ಹನೋಯ್ ಜತೆ, ಇಂದಿರಾನಗರದ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ರೂಮ್ ಬುಕ್ ಮಾಡಿಕೊಂಡು ತಂಗಿದ್ದರು. ಆದರೆ ಅದೇನಾಯ್ತೋ ಏನೋ ಮಾರನೇ ದಿನ ಪ್ರಿಯಕರ ಆರವ್, ತನ್ನ ಪ್ರೇಯಸಿ ಮಾಯಾಳನ್ನು ಕೊಂದು ಪರಾರಿಯಾಗಿದ್ದನುಯ
ನವೆಂಬರ್ 23ರಂದು ಮಧ್ಯಾಹ್ನ ಮಾಯಾ ಗೊಗೋಯ್ ಹಾಗೂ ಆರವ್ ಹಾರ್ನಿ ಇಬ್ಬರು ಒಟ್ಟಿಗೆ ತಂಗಲು ಅಪಾರ್ಟ್ ಮೆಂಟ್ ಗೆ ಆಗಮಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 24 ರಂದೇ ಮಾಯಾ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಕೊಲೆ ಬಳಿಕ ಅದೇ ರೂಮ್ ನಲ್ಲಿಯೇ ಉಳಿದುಕೊಂಡಿದ್ದಾನೆ. ಅಲ್ಲಿಯೇ ಕೂತು ಸಿಗರೇಟ್ ಸೇದಿದ್ದಾನೆ. ಮೃತದೇಹ ಜೊತೆಯಲ್ಲೇ ಕಾಲ ಕಳೆದಿದ್ದು, ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಸರ್ವಿಸ್ ಅಪಾರ್ಟ್ ಮೆಂಟ್ನಿಂದ ಕಾಲ್ಕಿತ್ತಿದ್ದನು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು, ಕೊಲೆಗೆ ನಿಖರ ಕಾರಣ ಏನು ಎನ್ನುವುದನ್ನು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ