ಬಳ್ಳಾರಿ: ಕೇವಲ 15 ದಿನಗಳ ಅಂತರದಲ್ಲಿ 5 ಮಂದಿ ಬಾಣಂತಿಯರ ಸಾವಿನ ಮೂಲಕ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬಳ್ಳಾರಿ ಸರ್ಕಾರಿ ಆಸ್ಪತ್ರೆ (BIMS) ವಿಚಾರ ಇದೀಗ ಮತ್ತೆ ಸುದ್ದಿಯಾಗುತ್ತಿದೆ.
ಹೌದು.. ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ (BIMS) ಕಳೆದ 15 ದಿನಗಳಲ್ಲಿ ಐದು ಬಾಣಂತಿಯರ ಸಾವಿಗೆ ಕಾರಣವೇನು ಎಂಬುದು ಕೊನೆಗೂ ಬಹಿರಂಗವಾಗಿದ್ದು, ಬಾಣಂತಿಯರಿಗೆ ಸಿಸೇರಿಯನ್ ವೇಳೆ ನೀಡಿದ್ದ ಕಳಪೆ ಮಟ್ಟದ “IV ಗ್ಲೂಕೋಸ್”ನಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತನಿಖಾ ಸಂಸ್ಥೆ ಸರ್ಕಾರಕ್ಕೆ (Karnataka Government) ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಸುದ್ದಿಮಾಧ್ಯಮವೊಂದು ವರದಿ ಮಾಡಿದ್ದು, ಅಂದು ಬಾಣಂತಿಯರಿಗೆ ನೀಡಿದ್ದ ಐವಿ (ಇಂಟ್ರಾವೆನಸ್ ದ್ರಾವಣ) ಕಳಪೆ ಗುಣಮಟ್ಟದಿಂದ ಕೂಡಿತ್ತು. ಆದರೂ, ಕೂಡ ವೈದ್ಯರು ಸಿಸೇರಿಯನ್ ವೇಳೆ “IV ಗ್ಲುಕೋಸ್” ನೀಡಿದ್ದರಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತನಿಖಾ ತಂಡ ಪತ್ತೆ ಹಚ್ಚಿದೆ. ಹೀಗಾಗಿ, ಇಂಟ್ರಾವೆನಸ್ ದ್ರಾವಣ (IV ಗ್ಲುಕೋಸ್) ಬಳಕೆ ಮಾಡದಂತೆ ಆರೋಗ್ಯ ಇಲಾಖೆ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಏನಿದು ಪ್ರಕರಣ?
ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಣಿಯರಿಗೆ ಸಿಸೇರಿಯನ್ ಮಾಡಲಾಗಿತ್ತು. ಸಿಸೇರಿಯನ್ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ನವೆಂಬರ್ 09 ರಂದು ಹೆರಿಗೆ ಬಳಿಕ ಏಕಾಏಕಿ 07 ಜನ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆರೋಗ್ಯದಲ್ಲಿನ ಏರುಪೇರಿಂದ ಕೇವಲ 15 ದಿನಗಳಲ್ಲಿ 5 ಬಾಣಂತಿಯರು ಮೃತಪಟ್ಟಿದ್ದರು. ಈ ವಿಚಾರ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಈ ನಡುವೆ ಬಾಣಂತಿಯರ ಸಾವಿಗೆ ಕಾರಣವೇನು ಎಂಬುವುದನ್ನು ತಿಳಿಯಲು ಸರ್ಕಾರ ತಜ್ಞರ ಸಮಿತಿ ರಚಿಸಿತ್ತು. ಡಾ. ಸವಿತಾ, ಡಾ. ಭಾಸ್ಕರ್ ಮತ್ತು ಡಾ. ಹರ್ಷ ಅವರನ್ನು ಒಳಗೊಂಡ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಿದ್ದು, ಈ ಕೂಡಲೇ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾವಿಗೆ ಏನು ಕಾರಣ ಎಂದು ತನಿಖೆ ನಡೆಸಬೇಕು ಎಂದು ಸೂಚಿಸಿತ್ತು.
ಅಲ್ಲದೆ ತನಿಖೆ ಬಳಿಕ ಸರ್ಕಾರಕ್ಕೆ ತುರ್ತು ವರದಿಯನ್ನ ಸಲ್ಲಿಕೆ ಮಾಡಬೇಕೆಂದು ಸೂಚನೆ ನೀಡಿತ್ತು. ತನಿಖೆ ನಡೆಸಿದ ತಂಡ ಸಾವಿಗೆ ಕಾರಣವೇನು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಐವಿ ಗ್ಲೂಕೋಸ್ ನೀಡಿರುವುದೇ ಗರ್ಭಿಣಿಯರ ಸಾವಿಗೆ ಕಾರಣ ಎಂದು ತನಿಖಾ ತಂಡ ವರದಿ ನೀಡಿದೆ ಎಂದು ಹೇಳಲಾಗಿದೆ.
Advertisement