ಮೈಸೂರು: ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರೇ ಮಂಗಳವಾರ ಮೈಸೂರಿನ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿ ತಮಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿ(ಮುಡಾ) ತಮಗೆ ಮಂಜೂರು ಮಾಡಿದ್ದ 14 ನಿವೇಶನಗಳ ಖಾತೆ ರದ್ದು ಮಾಡಿಸಿದ್ದಾರೆ.
ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಸಹ ಎಫ್ಐಆರ್ ದಾಖಲಿಸಿತ್ತು. ಸಿಎಂಗೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಇಂದು ಸೈಟ್ಗಳನ್ನು ವಾಪಸ್ ಮುಡಾಗೆ ನೀಡಿದ್ದಾರೆ.
ಸಿಎಂ ಪತ್ನಿ ಒಟ್ಟು 14 ನಿವೇಶನಗಳನ್ನು ವಾಪಸ್ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಮುಡಾ ಆಯುಕ್ತ ರಘುನಂದನ್ ಅವರು, 14 ಸೈಟ್ಗಳು ಮುಡಾಗೆ ವಾಪಸ್ ಆಗಿದ್ದು, ಈಗ 14 ಸೈಟ್ಗಳ ಕ್ರಯಪತ್ರ ರದ್ದಾಗಿದೆ ಎಂದು ಹೇಳಿದ್ದಾರೆ.
ಅವರು(ಸಿಎಂ ಪತ್ನಿ) ಸ್ವಇಚ್ಛೆಯಿಂದ ಬಂದು ಕೊಟ್ಟಿದ್ದಕ್ಕೆ ನಾವು ಸ್ವೀಕರಿಸಿದ್ದೇವೆ. ಇದನ್ನ ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಾರ್ವತಮ್ಮ ಸಿದ್ದರಾಮಯ್ಯ ಅವರು ಈಗ ಸ್ವ ಇಚ್ಛೆಯಿಂದ ಸೈಟ್ ವಾಪಸ್ಸು ಕೊಟ್ಟಿದ್ದಾರೆ. ಕಾನೂನು ಪರಿಗಣಿಸಿ ನಾವು ಪಾರ್ವತಮ್ಮ ಅವರ ಹೆಸರಿನಲ್ಲಿ ಇದ್ದ 14 ಸೈಟ್ ಗಳ ಸೆಲ್ ಡೀಡ್ ರದ್ದು ಮಾಡಿದ್ದೇವೆ. ಈಗ 14 ನಿವೇಶನ ಮೂಡಾ ವ್ಯಾಪ್ತಿಗೆ ಬಂದಿವೆ. ಈ ಸೈಟ್ ಗಳನ್ನು ಬೇರೆಯವರಿಗೆ ಹಂಚಬಹುದಾ ಅಥವಾ ತನಿಖೆ ಮುಗಿಯುವವರೆಗೂ ಹಂಚಬಾರದು ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ ಎಂದರು.
ಪಾರ್ವತಮ್ಮ ಅವರ ಸೈಟ್ ಗಳು ತಮ್ಮ ವಶಕ್ಕೆ ಪಡೆದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೊಡುತ್ತೇವೆ. ತನಿಖೆ ನಡೆಯುತ್ತಿದ್ದರು ಸಂಬಂಧಿತರು ಸೈಟ್ ವಾಪಾಸ್ ಕೊಟ್ಟರೆ ವಾಪಸ್ಸು ಪಡೆಯಬಹುದು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಮುಡಾ ಆಯುಕ್ತರು ತಿಳಿಸಿದ್ದಾರೆ.
Advertisement