
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಸುಮಾರು ಐದು ಮಿಲಿಯನ್ ಹಿರಿಯ ನಾಗರಿಕರು ಮಾಸಿಕ ಪಿಂಚಣಿ ಪಡೆಯುತ್ತಿದ್ದು, ಈ ಮೊತ್ತವನ್ನು ಹೆಚ್ಚಿಸುವ ಕುರಿತು ಸರ್ಕಾರ ಪರಿಶೀಲಿಸಿ ನಿರ್ಧರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಘೋಷಿಸಿದರು.
ಬೆಂಗಳೂರಿನಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು.
ಹಿರಿಯರು ನೀಡಿದ ಸಾಮಾಜಿಕ ಕೊಡುಗೆಗಳನ್ನು ಸಮಾಜ ಗೌರವಿಸಬೇಕು, ಹಿರಿಯರು ಕೂಡ ಕೇವಲ ಗೌರವಕ್ಕೆ ಪಾತ್ರರಾಗದೆ ಯುವಕರಿಗೆ ಸ್ಫೂರ್ತಿಯಾಗಬೇಕು. ಜಾಗತಿಕ ಪ್ರಜೆಗಳಾಗಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ, ಪೂರಕ ಮನೆಯ ವಾತಾವರಣವಿದ್ದರೂ ಕೂಡ ತಮ್ಮ ಮಕ್ಕಳು ವಿದೇಶದಲ್ಲಿ ನೆಲೆಸಿರುವುದರಿಂದ ಹೆಚ್ಚಿನ ವೃದ್ಧರು ವೃದ್ಧಾಶ್ರಮಗಳ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಈ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಆರು ವ್ಯಕ್ತಿಗಳು ಹಾಗೂ ಒಂದು ಸೇವಾ ಸಂಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೆಚ್ಚುವರಿಯಾಗಿ ಸಿಎಂ ಸಿದ್ದರಾಮಯ್ಯ ಅವರು, 10 ಮಹಿಳೆಯರಿಗೆ ಪೌಷ್ಟಿಕಾಂಶದ ಕಿಟ್ ವಿತರಿಸಿದರು.
ಬಳಿಕ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ವೃದ್ಧರಿಗೆ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಳಿಕ ಹಿರಿಯ ನಾಗರೀಕರ ಮಾಸಿಕ ಪಿಂಚಣಿ ಹೆಚ್ಚಿಸುವ ಕುರಿತು ಬೇಡಿಕೆಗಳು ಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು.
ರಾಜ್ಯದಲ್ಲಿ ಸರಿಸುಮಾರು 5.7 ಮಿಲಿಯನ್ ಹಿರಿಯ ನಾಗರಿಕರಿದ್ದು, ಸರ್ಕಾರವು 2024-25ನೇ ಹಣಕಾಸು ವರ್ಷದಲ್ಲಿ ಹಿರಿಯ ನಾಗರೀಕರ ಕಲ್ಯಾಣಕ್ಕಾಗಿ 10.47 ಕೋಟಿ ರೂ.ಗಳನ್ನು ವಿನಿಯೋಗಿಸಿದೆ, ದುರ್ಬಲ ಮತ್ತು ನಿರ್ಗತಿಕ ಹಿರಿಯ ವ್ಯಕ್ತಿಗಳನ್ನು ಬೆಂಬಲಿಸಲು ಸ್ವ-ಸಹಾಯ ಸಂಸ್ಥೆಗಳ ಮೂಲಕ ರಾಜ್ಯಾದ್ಯಂತ 63 ವೃದ್ಧಾಶ್ರಮಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ, 1,575 ವೃದ್ಧರು ಈ ವೃದ್ಧಾಶ್ರಮಗಳಲ್ಲಿ ವಾಸವಿದ್ದು. ಹೆಚ್ಚುವರಿ 19 ವೃದ್ಧಾಶ್ರಮಗಳನ್ನು ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
Advertisement