
ಮೈಸೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಸಿಎಂ ಸಿದ್ದರಾಮಯ್ಯ ಪತ್ನಿಗೆ ಮಂಜೂರಾಗಿದ್ದ 14 ಸೈಟ್ ಗಳಲ್ಲಿ ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಅವರಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎನ್ನಲಾದ 14 ಮುಡಾ ನಿವೇಶನಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ಜೊತೆಯಲ್ಲಿ ಅವರು ನಿವೇಶನಗಳ ಅಳತೆಯನ್ನು ನಡೆಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇದೇ ವೇಳೆ ಮುಡಾ ಪ್ರಕರಣದ ದೂರುದಾರರಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇದೇ ವೇಳೆ ಹಾಜರಾಗಿದ್ದರು. ಲೋಕಾಯುಕ್ತ ಅಧಿಕಾರಿಗಳ ಬುಲಾವ್ ಮೇರೆಗೆ ಅವರು ಹಾಜರಿದ್ದರು ಎಂದು ಹೇಳಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, '14 ಸ್ಥಳಗಳ ಸ್ಥಳ ಪರಿಶೀಲನೆಗಾಗಿ ಲೋಕಾಯುಕ್ತರು ನನ್ನನ್ನು ಇಂದು ಕರೆಸಿದ್ದರು' ಎಂದು ಮಾಹಿತಿ ನೀಡಿದರು.
ಸೆಪ್ಟೆಂಬರ್ 25 ರಂದು ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಮತ್ತು ಇತರರ ವಿರುದ್ಧ ಸೆಪ್ಟೆಂಬರ್ 27 ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಒಂದು ದಿನದ ಬಳಿಕ ವಿಶೇಷ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ.
ಏತನ್ಮಧ್ಯೆ 14 ಸೈಟ್ ಗಳ ಮಾಲೀಕತ್ವ ಮತ್ತು ಸ್ವಾಧೀನವನ್ನು ತ್ಯಜಿಸುವ ನಿರ್ಧಾರವನ್ನು ಅನುಸರಿಸಿ ಮುಡಾ ಮಂಗಳವಾರ ಸೈಟ್ ಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಈ ನಿವೇಶನಗಳ ಮಾರಾಟ ಪತ್ರವನ್ನು ರದ್ದುಪಡಿಸಲು ಮುಡಾ ಆದೇಶಿಸಿದೆ ಎಂದು ಮುಡಾ ಆಯುಕ್ತ ಎಎನ್ ರಘುನಂದನ್ ತಿಳಿಸಿದ್ದಾರೆ.
Advertisement