ಬೆಂಗಳೂರು: ಮೈಸೂರು ದಸರಾ-2024 ಮತ್ತು ದಸರಾ ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ.
ದಸರಾ ರಜೆ ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 9-ಅಕ್ಟೋಬರ್ 12ರ ನಡುವೆ 2,000 ಹೆಚ್ಚುವರಿ ಬಸ್ ಕಾರ್ಯಾಚರಣೆಯನ್ನು ಕೆಎಸ್‌ಆರ್‌ಟಿಸಿ ಶುಕ್ರವಾರ ಪ್ರಕಟಿಸಿದೆ. ಇದಲ್ಲದೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ‘ಫ್ಲೈ ಬಸ್’ ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಿದ್ದು, ಮೈಸೂರಿನಲ್ಲಿ ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ ವಿಶೇಷ ಪ್ರವಾಸ ಕಾರ್ಯಾಚರಣೆ ಆರಂಭಿಸಿದೆ.
ಈ ವಿಶೇಷ ಬಸ್‌ಗಳು ನಗರದ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಕಾರ್ಯನಿರ್ವಹಿಸಲಿವೆ. ಅಲ್ಲದೆ, ಮೈಸೂರು ಮತ್ತು ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್‌ಡಿ ಕೋಟೆ, ಚಾಮರಾಜನಗರ, ಹುಣಸೂರು, ಕೆಆರ್ ನಗರ ಮತ್ತು ಗುಂಡ್ಲುಪೇಟೆ ಸುತ್ತಮುತ್ತಲಿನ ಪ್ರವಾಸಿ/ಯಾತ್ರಾ ಕೇಂದ್ರಗಳಿಗೆ ಭೇಟಿ ನೀಡುವ ಪ್ರವಾಸಿಗರ ಅಗತ್ಯತೆಗಳನ್ನು ಪೂರೈಸಲು ಮೈಸೂರಿನಿಂದ 400 ವಿಶೇಷ ಬಸ್‌ಗಳು ನಿಯೋಜನೆಗೊಳಿಸಿದೆ.
ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಆರ್ ಹಿಲ್ಸ್, ನಂಜನಗೂಡು ಮತ್ತು ಚಾಮುಂಡಿ ಬೆಟ್ಟಗಳಿಗೆ ಭೇಟಿ ನೀಡಲು ಮೈಸೂರಿನಿಂದ ಬರುವ ಪ್ರವಾಸಿಗರಿಗೆ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಸೌಲಭ್ಯವನ್ನು ಕೂಡ ಪ್ರಕಟಿಸಿದೆ.
ಈ ಬಸ್‌ಗೆ ‘ಗಿರಿದರ್ಶಿನಿ’ ಎಂದು ಹೆಸರಿಡಲಾಗಿದ್ದು, ಹಿರಿಯರಿಗೆ 400 ಹಾಗೂ ಮಕ್ಕಳಿಗೆ 250 ರೂ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ಅದೇ ರೀತಿ 'ಜಲದರ್ಶಿನಿ' ಮಾರ್ಗದ ಬಸ್‌ಗಳು ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ, ನಿಸರ್ಗಧಾಮ, ರಾಜಾ ಸೀಟ್, ಹಾರಂಗಿ ಜಲಾಶಯ ಮತ್ತು ಕೆಆರ್‌ಎಸ್‌ನಲ್ಲಿ ಸಂಚರಿಸಲಿವೆ. ಈ ಬಸ್‌ಗಳಲ್ಲಿ ವಯಸ್ಕರಿಗೆ 450 ರೂ., ಮಕ್ಕಳಿಗೆ 300 ರೂ ನಿಗದಿ ಮಾಡಲಾಗಿದೆ.
'ದೇವದರ್ಶಿನಿ' ಬಸ್‌ಗಳು ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ ಮತ್ತು ಶ್ರೀರಂಗಪಟ್ಟಣವನ್ನು ಒಳಗೊಂಡಿರುತ್ತವೆ. ಈ ಬಸ್ ಗಳಲ್ಲಿ ಸಂಚರಿಸುವ ಹಿರಿಯರಿಗೆ 300 ಮತ್ತು ಮಕ್ಕಳಿಗೆ 200 ರೂ ಟಿಕೆಟ್ ದರ ನಿಗದಿ ಮಾಡಲಾಗಿದೆ.
ಈ ಬಸ್ ಗಳಲ್ಲಿ ಸಂಚರಿಸಲು ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಒಟ್ಟಿಗೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದರೆ ಶೇ 5ರಷ್ಟು ಹಾಗೂ ಹೋಗುವ, ಬರುವ ಪ್ರಯಾಣದ ಟಿಕೆಟ್ ಅನ್ನು ಒಟ್ಟಿಗೆ ಕಾಯ್ದಿರಿಸಿದರೆ ಬರುವ ಪ್ರಯಾಣ ದರದಲ್ಲಿಶೇ 10ರಷ್ಟು ರಿಯಾಯಿತಿ ಸಿಗಲಿದೆ. www.ksrtc.karnataka.gov.in ವೆಬ್‌ಸೈಟ್ ಅಥವಾ ಮೊಬೈಲ್ ಮೂಲಕ ಇ-ಟಿಕೆಟ್ ಕಾಯ್ದಿರಿಸಬಹುದಾಗಿದೆ.
Advertisement