
ಬಳ್ಳಾರಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದರ ನಡುವಲ್ಲೇ ಬಳ್ಳಾರಿಯಲ್ಲಿ ಬುಡಾ ಹಗರಣ ಬೆಳಕಿಗೆ ಬಂದಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ, ಬುಡಾ ಅಧ್ಯಕ್ಷ ತನ್ನ ಅಧಿಕಾರ ದುರುಪಯೋಗ ಮಾಡಿ ಅಕ್ರಮ ಎಸೆಗಿದ್ದಾರೆ ಎಂದು ಸ್ವಪಕ್ಷೀಯ ಕಾಂಗ್ರೆಸ್ ಶಾಸಕರೇ ಪತ್ರ ಬರೆದಿರುವುದು ತೀವ್ರ ಸಂಚಲನ ಸೃಷ್ಟಿಸಿದೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್ ಆಂಜನೇಯಲು ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಲೇಔಟ್ ನಿರ್ಮಾಣ, ಅನುಮತಿ ಮತ್ತು ಹಂಚಿಕೆ ಸಂಬಂಧ ಮಾಚ್ 7 ಮತ್ತು ಜುಲೈ 8ನೇ ತಾರೀಖು ನಡೆದ ಸಭೆಯ ನಡಾವಳಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು, ಆ ಮೂಲಕ ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪಿಸಿ ಜೆ ಎಸ್ ಆಂಜಿನೇಯಲು ವಿರುದ್ದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಬುಡಾ ಅಕ್ರಮದ ಬಗ್ಗೆ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ (ಹಾಗೂ ಕಂಪ್ಲಿ ಶಾಸಕ ಜೆ ಎಸ್ ಗಣೇಶ್ ಅವರು ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಹಗರಣ ಪ್ರಕರಣವನ್ನು ತನಿಖೆಗೆ ಆದೇಶಿಸಿ, ತನಿಖೆಗಾಗಿ ಆರು ಜನ ಅಧಿಕಾರಿಗಳ ತಂಡ ರಚನೆ ಮಾಡಿದೆ. ತನಿಖಾ ತಂಡ ಕೂಡ ಈಗಾಗಲೇ ತನಿಖೆಯನ್ನು ಪೂರ್ಣಗೊಳಿಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ಈ ನಡುವೆ ಆಂಜನೇಯುಲು ಅವರು ಆರೋಪವನ್ನು ನಿರಾಕರಿಸಿದ್ದು, ನಿವೇಶನ ಮಂಜೂರು ಮಾಡುವಾಗ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆ ಎಂದು ಹೇಳಿದ್ದಾರೆ.
ನನ್ನ ಪಕ್ಷದ ಶಾಸಕರೇ ನನ್ನ ವಿರುದ್ಧ ದೂರು ನೀಡಿದ್ದಾರೆ. ಅವರು ನನ್ನ ಹಿರಿಯರು. ಹೀಗಾಗಿ ಆವರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ, ಬುಡಾದಲ್ಲಿ ಯಾವುದೇ ಹಗರಣವಿಲ್ಲ. ಪ್ರಕರಣದ ತನಿಖೆಗೆ ರಚಿಸಿರುವ ಸಮಿತಿಯು ಕ್ಲೀನ್ ಚಿಟ್ ನೀಡಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ
Advertisement