
ರಾಮನಗರ: ರಾಜಸ್ಥಾನದ ಗಣಿ ಉದ್ಯಮಿಯೊಬ್ಬರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪಾಲನಹಳ್ಳಿ ಮಠಕ್ಕೆ ಬರೋಬ್ಬರಿ ಮೂರು ಸಾವಿರ ಎಕರೆ ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಹೌದು, ಆಶ್ಚರ್ಯವಾದರೂ ಇದು ನಿಜ. ಉದ್ಯಮಿ ಪಿಬಿ ಓಸ್ವಾಲ್ ಜೈನ್ ಅವರು ವ್ಯಾಪಾರ ವಹಿವಾಟಿನಿಂದ ಸಂಪಾದಿಸಿದ ಆಸ್ತಿ ಸಂಪತ್ತೆಲ್ಲವನ್ನೂ ದಾನದ ರೂಪದಲ್ಲಿ ಮಠಕ್ಕೆ ದೇಣಿಗೆ ನೀಡಿದ್ದಾರೆ. ಇದೀಗ ಆಸ್ತಿಯ ದಾಖಲೆಗಳನ್ನ ಮಠಕ್ಕೆ ಒಪ್ಪಿಸಿದ ಅವರು, ತಮ್ಮ ಸ್ವಯಾರ್ಜಿತ ಆಸ್ತಿ ಮಾತ್ರ ಇಬ್ಬರು ಮಕ್ಕಳಿಗೆ ಕೊಟ್ಟಿದ್ದಾರೆ.
78 ವರ್ಷದ ರಾಜಸ್ಥಾನದ ಗಣಿ ಉದ್ಯಮಿ ಪಿ.ಬಿ. ಓಸ್ವಾಲ್ ಜೈನ್ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿ ಅವರಿಗೆ ಆಸ್ತಿ ಪತ್ರ ಹಸ್ತಾಂತರಿಸಿದ್ದಾರೆ. ಕಾನೂನಾತ್ಮಕವಾಗಿ ಆಸ್ತಿ ಹಸ್ತಾಂತರ ಮಾಡಿರೋ ಉದ್ಯಮಿ ಪಿ.ಬಿ. ಓಸ್ವಾಲ್ ಜೈನ್, ಕಳೆದ 27 ವರ್ಷಗಳಿಂದ ಪಾಲನಹಳ್ಳಿ ಮಠದ ಜೊತೆ ಒಡನಾಟ ಹೊಂದಿದ್ದರು ಎನ್ನಲಾಗಿದೆ.
ಓಸ್ವಾಲ್ ಜೈನ್ ಅವರು ತಾವು ಕಂಪನಿ ಆರಂಭಿಸಿದ ದಿನದಿಂದಲೂ ಈ ಮಠದ ಶ್ರೀಗಳ ಮಾರ್ಗದರ್ಶನ ಪಡೆದುಕೊಂಡು ಮುನ್ನಡೆಯುತ್ತಿದ್ದಾರೆ. ಅದರಂತೆ ಮಠದ ಶ್ರೀಗಳ ಮಾರ್ಗದರ್ಶನದಿಂದ ಈ ಯಶಸ್ಸು ಸಿಕ್ಕಿದೆ. ಹಾಗಾಗಿ ಮೋಕ್ಷ ಸಾಧನೆಗಾಗಿಯೇ ಮಠಕ್ಕೆ ಆಸ್ತಿ ಬರೆದುಕೊಟ್ಟಿರುವುದಾಗಿ ಉದ್ಯಮಿ ಹೇಳಿದ್ದಾರೆ.
Advertisement