ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಸದ ರಾಶಿ, ನಿವೇಶನ ಮಾಲೀಕರಿಗೆ ನೋಟಿಸ್ ನೀಡಲು ಬಿಡಿಎಗೆ ಲೋಕಾಯುಕ್ತ ನಿರ್ದೇಶನ!

ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವ ಸರ್‌.ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ನಿವೇಶನ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆ ಬಿಡಿಎಗೆ ಆದೇಶ.
Published on

ಬೆಂಗಳೂರು: ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿರುವ ಸಂಬಂಧ ಸ್ವಯಂ ಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಲೋಕಾಯುಕ್ತರು, ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ನಿವೇಶನ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಆದೇಶಿಸಿದ್ದಾರೆ.

ರಾಜರಾಜೇಶ್ವರಿ ನಗರದ ಕಸದ ಸಮಸ್ಯೆಗೆ ಸಂಬಂಧಿಸಿದಂತೆ ನಡೆದಿರುವ ದುರಾಡಳಿತ ಕುರಿತು ಬಿಡಿಎ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಅಧಿಕಾರಿಗಳಿಂದ ಸಮಸ್ಯೆ ಆಲಿಸಿದ ಲೋಕಾಯುಕ್ತರು, ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವ ಸರ್‌.ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ನಿವೇಶನ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆ ಬಿಡಿಎಗೆ ಆದೇಶಿಸಿದ್ದಾರೆ.

ಆರ್.ಆರ್.ನಗರ ವಲಯದ ಇತರೆ ಭಾಗಗಳಲ್ಲಿ ಇರುವಂತೆ ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಕಸ ಸಂಗ್ರಹಣೆ, ಸಾಗಣೆ, ವಿಲೇವಾರಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಬಡಾವಣೆಯನ್ನು ಇನ್ನೂ ಬಿಬಿಎಂಪಿಗೆ ಹಸ್ತಾಂತರಿಸದಿದ್ದರೂ, ಬಡಾವಣೆಯಲ್ಲಿ ಕಸ ಸಂಗ್ರಹಿಸುತ್ತಿದ್ದು, ಬಾಕಿಯನ್ನು ಬಿಡಿಎ ಪಾವತಿಸುತ್ತಿಲ್ಲ ಎಂದು ಬಿಬಿಎಂಪಿ ಹೇಳಿದೆ. ಇದರ ಬೆನ್ನಲ್ಲೇ ಲೋಕಾಯುಕ್ತರು ಎರಡು ವಾರಗಳಲ್ಲಿ ಸಮಸ್ಯೆ ಇತ್ಯರ್ಥಪಡಿಸಿ ವರದಿ ಸಲ್ಲಿಸುವಂತೆ ಬಿಡಿಎಗೆ ಸೂಚಿಸಿದರು.

ಖಾಲಿ ನಿವೇಶನಗಳಲ್ಲಿ ಕಸ ಸುರಿದು, ಗಿಡಗಂಟಿಗಳು ಬೆಳೆದು ಸ್ಥಳೀಯರಿಗೆ ತೊಂದರೆಯಾಗುತ್ತಿರುವ ಜಾಗದ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸೈಟ್ ಮಾಲೀಕರು ತಮ್ಮ ಆಸ್ತಿಗಳನ್ನು ಸ್ವಚ್ಛಗೊಳಿಸಬೇಕು ಅಥವಾ ತಮ್ಮ ಸೈಟ್ ಗಳನ್ನು ಸ್ವಚ್ಛಗೊಳಿಸುವ ಬಿಬಿಎಂಪಿಗೆ ವೆಚ್ಚ ಭರಿಸಬೇಕು ಎಂದು ನಿರ್ದೇಶನ ನೀಡಿದೆ.

ಇದಲ್ಲದೆ, ಬಡಾವಣೆಯಲ್ಲಿ ಸರಿಯಾದ ಬೀದಿದೀಪಗಳನ್ನು ಅಳವಡಿಸಿ ನಿರ್ವಹಣೆ ಮಾಡುವಂತೆ ಬಿಡಿಎಗೆ ಸೂಚಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಂಚಾಯಿತಿ ಅಥವಾ ಬಿಡಿಎ ಬಡಾವಣೆಗಳನ್ನು ಸ್ವಚ್ಛಗೊಳಿಸುವಂತೆ ಪಾಲಿಕೆಗೆ ಸೂಚಿಸಲಾಗಿದೆ. ಸರ್ ಎಂವಿ ಲೇಔಟ್‌ನಲ್ಲಿ ತ್ಯಾಜ್ಯ ಸಂಗ್ರಹಣೆ ಸಮಸ್ಯೆ ಪರಿಹರಿಸಲು ಸರಿಯಾದ ಸಿಬ್ಬಂದಿ,ಸಹಾಯಕ ಸಿಬ್ಬಂದಿ ಮತ್ತು ಆಟೋ ಟಿಪ್ಪರ್‌ಗಳನ್ನು ಒದಗಿಸುವಂತೆ ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ.

ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ: ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಪರದಾಟ!

ಬೆಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಸಾರ್ವಜನಿಕರು ಬೆಳಗಿನ ನಡಿಗೆಯ ವೇಳೆ ಮನಬಂದಂತೆ ಎಸೆಯುತ್ತಿರುವ ಕಸದ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಜ್ಞಾನಭಾರತಿ ಕ್ಯಾಂಪಸ್ ನಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ. ಬೀದಿನಾಯಿ ಸಮಸ್ಯೆಯಿಂದ ಮನುಷ್ಯರ ಅಪಾಯವಾಗದಂತೆ ಕ್ರಿಮಿನಾಶಕ, ರೇಬಿಸ್ ನಿಯಂತ್ರಣ ಕಾರ್ಯ್ರಮ, ಹುಚ್ಚು ನಾಯಿಗಳ ನಿರ್ವಹಣೆ, ಬೀದಿನಾಯಿಗಳಿಗೆ ಆಹಾರ ನೀಡುವಿಕೆ ಮತ್ತಿತರ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com