
ಬೆಂಗಳೂರು: ರಾತ್ರಿಯಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ನಿಲ್ಲುವ ಮುನ್ಸೂಚನೆಯೇ ದೊರೆಯುತ್ತಿಲ್ಲ.. ಈ ನಡುವೆ ಸಂಜೆಯೊಳಗೆ ಮತ್ತೆ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ವರದಿಯೊಂದು ಹೇಳಿದೆ.
ಬೆಂಗಳೂರು ವೆದರ್ ಸಂಸ್ಥೆ ನೀಡಿರುವ ವರದಿಯನ್ವಯ ಬೆಂಗಳೂರಿನ ಮೇಲೆ ದಟ್ಟವಾದ ಮಳೆ ಮೋಡಗಳು ಆವರಿಸಿದ್ದು, ಪರಿಣಾಮ ಇಂದು ಸಂಜೆಯೊಳಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ರಾತ್ರಿಯ ನಿರಂತರ ತುಂತುರು ಮಳೆಯ ನಂತರ, ಬೆಂಗಳೂರು ನಗರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಮಧ್ಯಾಹ್ನದ ನಂತರ ತೀವ್ರವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ರಾತ್ರಿಯಿಂದ ಬರೊಬ್ಬರಿ 33 ಮಿ.ಮೀ ಮಳೆ
ಇನ್ನು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆ ಸುರಿಯಲಾರಂಭಿಸಿದೆ. ಕಳೆದ ರಾತ್ರಿಯಿಂದ ಈವರೆಗೂ ಬೆಂಗಳೂರಿನಲ್ಲಿ ಬರೊಬ್ಬರಿ 33 ಮಿಮೀ ಮಳೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ 25.5 ಮಿಮೀ ಮಳೆಯಾಗಿದೆ. ನೆರೆಯ ಚಿಕ್ಕಬಳ್ಳಾಪುರದಲ್ಲಿ 60.5 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಿಶೇಷವಾಗಿ ಬೆಂಗಳೂರು ದಕ್ಷಿಣ ಮತ್ತು ಹಂಪಿ ನಗರದಲ್ಲಿ ಗರಿಷ್ಠ 26 ಮಿಮೀ ಮಳೆಯಾಗಿದೆ ಎಂದು ಹೇಳಿದೆ.
ಜನಜೀವನ ಅಸ್ತವ್ಯಸ್ಥ
ಬೆಂಗಳೂರಿನ ಹಲವೆಡೆ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ ಸುರಿಯುತ್ತಿದೆ. ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ಕೆ.ಆರ್.ಮಾರ್ಕೆಟ್, ವಿಧಾನಸೌಧ, ಶಿವಾಜಿನಗರ, ಬಸವನಗುಡಿ, ಜಯನಗರ, ಶ್ರೀನಗರ, ಹನುಮಂತನಗರ, ತ್ಯಾಗರಾಜನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ, ರಾಜಾಜಿನಗರ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.
Advertisement