
ಬೆಂಗಳೂರು: ಹಳೇ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ ಹಿನ್ನೆಲೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರದ ನಾಯಕರಿಗೆ ಪತ್ರ ಬರೆದಿದ್ದು, ಮರು ಪರಿಶೀಲನೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಇಸ್ಲಾಂ ಕುರಿತಂತೆ ವ್ಯಕ್ತಿಯೊಬ್ಬರು ಅವಹೇಳನಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು 2022ರ ಏಪ್ರಿಲ್ 16 ರಂದು ದುಷ್ಕರ್ಮಿಗಳು ಪೊಲೀಸ್ ಠಾಣೆಗೆ ನುಗ್ಗಿ, ಬಂಧಿತ ಆರೋಪಿಯನ್ನು ತಮಗೆ ಒಪ್ಪಿಸಬೇಕು ಎಂದು ದಾಂದಲೆ ನಡೆಸಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಇದರ ಪರಿಣಾಮ ಇಡೀ ಹುಬ್ಬಳ್ಳಿ ನಗರವನ್ನೇ ಬಂದ್ ಮಾಡಬೇಕಾದ ಸ್ಥಿತಿ ಬಂದಿತು.
ಈ ಗಲಭೆಯಲ್ಲಿ ದಾಂದಲೆ ನಡೆಸಿದವರ ಮೇಲಿದ್ದ ಎಫ್‌ಐಆರ್ ಅನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಸರ್ಕಾರದ ಈ ಕ್ರಮ ಸಂವಿಧಾನ ವಿರೋಧಿ ಮತ್ತು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದವರಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಸರ್ಕಾರದ ಈ ನಿರ್ಧಾರದ ಪರಿಣಾಮವಾಗಿ, ದೇಶ ವಿರೋಧಿ ಸಂಘಟಿತ ಅಪರಾಧದಲ್ಲಿ ತೊಡಗಿದವರು ಮುಂದೆಯೂ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಅಪಾಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
2022 ಎಪ್ರೀಲ್ 16 ರ ರಾತ್ರಿ ವಾಣಿಜ್ಯ ನಗರಿ ಖ್ಯಾತಿಯ ಹುಬ್ಬಳ್ಳಿಯಲ್ಲಿ ವಾಟ್ಸಪ್ ಸ್ಟೇಟಸ್ ವಿಚಾರವಾಗಿ ನಡೆದ ಗಲಭೆ ವಿಕೋಪಕ್ಕೆ ಹೋಗಿತ್ತು. ಬಳಿಕ ಮುಸ್ಲಿಂ ಧರ್ಮದ ಬಗ್ಗೆ ಸ್ಟೇಟಸ್ ಹಾಕಿದ್ದ ಯುವಕನನ್ನ ಬಂಧಿಸಿದ್ದರು. ಇದರಿಂದ ಠಾಣೆಗೆ ಮುತ್ತಿಗೆ ಹಾಕಿದ್ದ ಸುಮಾರು 150 ಜನರ ತಂಡ, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು.
ಪೊಲೀಸ್ ಠಾಣೆಯ ಮುಂದೆ ಗಲಾಟೆ ಮತ್ತು ದಾಂಧಲೆ ನಡೆಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಿಜೆಪಿ ಈ ಗಲಭೆ ಖಂಡಿಸಿ ಬಿದೀಗಿಳಿದು ಹೋರಾಟ ಕೂಡ ಮಾಡಿತ್ತು. ನಂತರ ಗಲಭೆ ಕೇಸ್ನಲ್ಲಿ ಕೆಲವರ ಬಂಧನವಾಗಿತ್ತು. ಇದೀಗ ಗಲಭೆಯ ಪ್ರಕರಣವನ್ನು ಸರ್ಕಾರ ವಾಪಸ್ ಪಡೆಯಲು ನಿರ್ಧಾರ ಮಾಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ಬಿಜೆಪಿ ಕೆರಳುವಂತೆ ಮಾಡಿದೆ.
Advertisement