
ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ತುಲಾ ಲಗ್ನದಲ್ಲಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವಾಗಿದೆ. ಬ್ರಹ್ಮಕುಂಡಿಕೆಯಲ್ಲಿ ತೀರ್ಥಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಿದ್ದಾಳೆ.
ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪ ತಲಕಾವೇರಿಯ ತೀರ್ಥೋದ್ಭವ ಬ್ರಹ್ಮಕುಂಡಿಕೆಯಲ್ಲಿ ಬಳಿ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ತೀರ್ಥೋದ್ಭವ ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಕೊಡಗಿನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆರತಿ ಹಿಡಿದು ಆಗಮಿಸಿದ್ದು, ಕಾವೇರಿ ಮಾತೆಗೆ ಆರತಿ ಬೆಳಗಿ ಸ್ವಾಗತಿಸಿದ್ದಾರೆ. ಕಾವೇರಿ ತವರಿನಲ್ಲಿ ಕುಲದೇವತೆ ಕಾವೇರಿ ಜಾತ್ರೆ ಕಳೆಕಟ್ಟಿದೆ. ಭಾಗಮಂಡಲ-ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ತೀರ್ಥೋಧ್ಬವದ ಹಿನ್ನೆಲೆ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಸಾಗರೋಪಾದಿಯಲ್ಲಿ ಭಕ್ತಾಧಿಗಳು ಹರಿದು ಬರುತ್ತಿದ್ದಾರೆ.
ಇದಕ್ಕಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಸಿದ್ಧತೆಗಳು ಪೂರ್ಣಗೊಂಡಿವೆ. ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಲಿದ್ದು, ಭಾಗಮಂಡಲದಿಂದ ತಲಕಾವೇರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯಲ್ಲೂ ಸಾವಿರಾರು ಭಕ್ತರು ಬರುವುದರಿಂದ, ಭಾಗಮಂಡಲದಿಂದ ತಲಕಾವೇರಿಯವರೆಗೆ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ತೀರ್ಥವನ್ನು ಪ್ಲಾಸ್ಟಿಕ್ ಕೊಡ, ಕ್ಯಾನ್, ಬಾಟಲಿಗಳಲ್ಲಿ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ.
Advertisement