
ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳನ್ನು ಹಾಟ್ ಏರ್ ಬಲೂನ್'ನಲ್ಲಿ (ಹಂಪಿ ಬೈ ಬಲೂನ್) ವೀಕ್ಷಣೆ ಮಾಡಲು ವಿಜಯನಗರ ಜಿಲ್ಲಾಡಳಿತ ಹಾಗೂ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಅನುಮತಿ ನೀಡಿದ್ದು, ಇದಕ್ಕೆ ಸಂರಕ್ಷಣಾ ವಾದಿಗಳು, ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟ ಹಂಪಿ ಬಳಿಯಿರುವ ಹೋಟೆಲ್ ವೊಂದು ಗ್ರಾಹಕರಿಗೆ ಹಾಟ್ ಏರ್ ಬಲೂನ್'ನಲ್ಲಿ ಹಂಪಿ ವೀಕ್ಷಿಸುವ ಅವಕಾಶ ನೀಡಿತ್ತು. ಇದೇ ನೆಪದಲ್ಲಿ ನಿರ್ವಾಹಕರು ಸ್ಮಾರಕಗಳ ಸಮೀಪ ತೆರಳಲು ಶುರು ಮಾಡಿತ್ತು. ಮಾರ್ಗಸೂಚಿಗಳನ್ನು ಅನುಸರಿಸಿರಲಿಲ್ಲ. ಇದೀಗ ಮತ್ತೊಮ್ಮೆ ವಿಜಯನಗರ ಜಿಲ್ಲಾಡಳಿತ ಬಲೂನ್ ರೈಡ್ ಗೆ ಅನುಮತಿ ನೀಡಿದೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಪಾರಂಪರಿಕ ಸ್ಮಾರಕಗಳನ್ನೇ ಬೆಲೆ ತೆರುವಂತೆ ಮಾಡುವುದು ಸರಿಯಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ. ಅಲ್ಲದೆ, ಈ ಕುರಿತು ಎಎಸ್‌ಐ ಉನ್ನತಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ವಿಜಯನಗರ ಜಿಲ್ಲಾಧಿಕಾರಿ ಎಂಎಸ್ ದಿವಾಕರ್ ಅವರು ಮಾತನಾಡಿ, ಹಂಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಟ್ ಏರ್ ಬಲೂನ್'ಗಳ ರೈಡ್'ಗೆ ಅನುಮತಿ ನೀಡಲಾಗಿದೆ. ಇದು ಸಂಪೂರ್ಣವಾಗಿ ಎಎಸ್ಐೈ ಮಾನದಂಡಗಳ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರತಿದಿನ ಕೇವಲ ಒಂದು ಸುತ್ತಿಗೆ ಮಾತ್ರ ಅನುಮತಿ ನೀಡಲಾಗಿದೆ. ನಿರ್ವಾಹಕರು ನಿರ್ಬಂಧಿತ ವಲಯಗಳನ್ನು ಪ್ರವೇಶಿಸುವಂತಿಲ್ಲ. ನಿಯಮಗಳನ್ನು ಉಲ್ಲಂಘಿಸಿದರೆ, ಅನುಮತಿಯನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹಂಪಿ ಸ್ಮಾರಕ ಸಂರಕ್ಷಣಾ ಸಂಘದ ಅಧ್ಯಕ್ಷ ವಿಶ್ವನಾಥ ಮಾಳಗಿ ಮಾತನಾಡಿ, ಹಾಟ್ ಏರ್ ಬಲೂನ್'ಗಳ ರೈಡ್'ಗೆ ಅನುಮತಿ ನೀಡಿರುವ ಜಿಲ್ಲಾಡಳಿತ ಮತ್ತು ಎಎಸ್ಐ ನಿರ್ಧಾರ ಸರಿಯಲ್ಲ. ಈ ಹಿಂದೆ ಈ ಹಾಟ್ ಏರ್ ಬಲೂನ್'ಗಳು ಸ್ಮಾರಕಗಳ ಹತ್ತಿರಕ್ಕೆ ಹೋಗಿದ್ದವು. ವಿಜಯ ವಿಟ್ಠಲ ದೇವಸ್ಥಾನಕ್ಕೆ ಬಹಳ ಹತ್ತಿರದಲ್ಲಿ ಚಲಿಸಿದ್ದವು. ಎರಡು ವರ್ಷಗಳ ಹಿಂದೆ ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ನಂತರ, ಹಂಪಿಯಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ನಿಷೇಧಿಸಲಾಗಿದೆ ಎಂದು ಆಡಳಿತವು ಕಟ್ಟುನಿಟ್ಟಾಗಿ ಸೂಚನೆ ನೀಡಿತ್ತು. ಹಾಟ್ ಏರ್ ಬಲೂನ್'ಗಳು ಗ್ಯಾಸ್ ಸಿಲಿಂಡರ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
Advertisement