ಮಂಗಳೂರು: ರೈಲು ಹಳಿ ಮೇಲೆ ಕಲ್ಲು ಬಿದ್ದು ಆತಂಕ ಸೃಷ್ಟಿ
ಮಂಗಳೂರು: ಕರಾವಳಿಯ ತೊಕ್ಕೊಟ್ಟು ಮೇಲ್ಸೇತುವೆ ಬಳಿಯ ರೈಲ್ವೆ ಹಳಿ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದು ಹೋಗಿದ್ದು, ಶನಿವಾರ ರಾತ್ರಿ ರೈಲುಗಳು ಅವುಗಳ ಮೇಲೆ ಹಾದು ಹೋಗುತ್ತಿದ್ದಂತೆ ಸ್ಥಳೀಯರಿಗೆ ದೊಡ್ಡ ಸದ್ದು ಕೇಳಿಸಿತು.
ಕೇರಳ ಮತ್ತು ಮಂಗಳೂರು ನಡುವೆ ಎರಡು ರೈಲುಗಳು ಹಳಿಯಲ್ಲಿ ಹಾದುಹೋದ ನಂತರ ಸ್ಥಳೀಯರು ಘಟನೆಯ ಬಗ್ಗೆ ಉಳ್ಳಾಲ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು.
ರಾತ್ರಿ 9 ಗಂಟೆ ಸುಮಾರಿಗೆ ಸ್ಥಳೀಯರಿಗೆ ಶಬ್ದ ಕೇಳಿಸಿದ್ದು, ಸ್ಥಳೀಯರ ದೂರಿನ ಮೇರೆಗೆ ರೈಲ್ವೇ ಪೊಲೀಸರು ರಾತ್ರಿ ಗಸ್ತು ನಡೆಸಿದಾಗ ಹಳಿಯಲ್ಲಿ ಪುಡಿಯಾದ ಕಲ್ಲುಗಳು ಪತ್ತೆಯಾಗಿವೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಹಳಿ ಬಳಿ ಮಕ್ಕಳು ಆಟವಾಡುತ್ತಿರುವಾಗ ಕಲ್ಲುಗಳನ್ನು ಇಡುತ್ತಿರುವ ಬಗ್ಗೆ ಅನುಮಾನ ಬಂತು. ರೈಲ್ವೆ ಇಲಾಖೆಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ನಾವು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ. ಯಾವುದೇ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕಲ್ಲುಗಳನ್ನು ಹಳಿ ಮೇಲೆ ಇರಿಸುವುದು ಪತ್ತೆಯಾದರೆ ನಾವು ಬಂಧಿಸುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಹಳಿಯ ಎರಡೂ ಬದಿಗಳಲ್ಲಿ ಕಲ್ಲುಗಳನ್ನು ಜೋಡಿಸಲಾಗಿದೆ. ಘಟನೆಯ ಒಂದು ಗಂಟೆ ಮೊದಲು ಇಬ್ಬರು ಅಪರಿಚಿತರು ಹಳಿ ಪಕ್ಕದಲ್ಲಿ ನಡೆದುಕೊಂಡು ಹೋಗುವುದನ್ನು ಕೆಲವು ಮಹಿಳೆಯರು ನೋಡಿದ್ದಾರೆ, ಇದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಘಟನೆ ಕುರಿತು ರೈಲ್ವೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ