ಕೊಪ್ಪಳ: ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ದಲಿತರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ಅಪರಾಧಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.
ರಾಮಪ್ಪ ಲಕ್ಷ್ಮಣ ಭೋವಿ (44) ಸಾವಿಗೀಡಾದ ಅಪರಾಧಿ. ಗಲಾಟೆ ಪ್ರಕರಣ ಸಂಬಂಧ ಗುರುವಾರ ಕೊಪ್ಪಳ ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಾಯಿತು.
ಈ ವೇಳೆ ಅಸ್ವಸ್ಥಗೊಂಡಿದ್ದ ಅಪರಾಧಿ ರಾಮಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆಂದು ವರದಿಗಳು ತಿಳಿಸಿವೆ.
2014ರ ಆಗಸ್ಟ್ 28 ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಮಂಜುನಾಥ ಮತ್ತು ಸ್ನೇಹಿತರು ಎಂಬುವರು ಪವರ್ ಸಿನಿಮಾ ನೋಡಲು ಗಂಗಾವತಿ ನಗರದಲ್ಲಿರುವ ಶಿವ ಚಿತ್ರಮಂದಿರಕ್ಕೆ ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಜಗಳ ಆರಂಭವಾಗಿತ್ತು. ಬಳಿಕ, ಮಂಜುನಾಥ್ ಮತ್ತು ಆತನ ಸ್ನೇಹಿತರು, “ನಮ್ಮೂರಿನ ದಲಿತರು ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ” ಎಂದು ಗ್ರಾಮದಲ್ಲಿ ಹೇಳಿದ್ದರು. ಇದು ಸವರ್ಣೀಯ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಹೀಗಾಗಿ ಅಂದು ಸಂಜೆ ಗ್ರಾಮದ ಸವರ್ಣೀಯರು, ದಲಿತರ ಕೇರಿ ಮೇಲೆ ದಾಳಿ ಮಾಡಿದ್ದರು. ದಲಿತರಿಗೆ ಸೇರಿದ್ದ ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಅನೇಕರ ಮೇಲೆ ಸಿಕ್ಕಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದರು. ಕೇವಲ ಬೆಂಕಿ ಹಚ್ಚಿದ್ದು ಮಾತ್ರವಲ್ಲ, ಅಂದು 27 ದಲಿತರ ಮೇಲೆ ಹಲ್ಲೆಯಾಗಿತ್ತು. ಈ ಬಗ್ಗೆ ಅಂದು ಘಟನೆಯಲ್ಲಿ ಗಾಯಗೊಂಡವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸವರ್ಣೀಯರ ವಿರುದ್ದ ಅಟ್ರಾಸಿಟಿ, ಕೊಲೆಗೆ ಯತ್ನ, ದೊಂಬಿ, ಜೀವ ಬೆದರಿಕೆ ಸೇರಿದಂತೆ ಅನೇಕ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳು ದಾಖಲಿಸಿದ್ದರು. ಘಟನೆ ಬಳಿಕ 117 ಸವರ್ಣೀಯರ ಮೇಲೆ ಕೇಸ್ ದಾಖಲಾಗಿತ್ತು.
ಬೆಂಕಿ ಅವಘಡದಲ್ಲಿ ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದವು. ಅದೃಷ್ಟವೆನ್ನುವಂತೆ ಗುಡಿಸಲುಗಳಲ್ಲಿ ಯಾರು ಇಲ್ಲದೇ ಇದ್ದಿದ್ದರಿಂದ ಅಂದು ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಈ ಘಟನೆ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಘಟನೆ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಎಲ್ಲರು ಜಾಮೀನಿನ ಮೇಲೆ ಹೊರಗಿದ್ದರು. ಆದರೆ, ಕಳೆದ ಹತ್ತು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಲೇ ಇತ್ತು. ನಿನ್ನೆ ಕೊಪ್ಪಳ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
Advertisement