
ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡಲು ನಗರದ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆ ಮತ್ತು ಮಿಂಟೋ ಆಸ್ಪತ್ರೆಗಳು ಸಜ್ಜಾಗಿವೆ.
ಅಧಿಕಾರಿಗಳ ಪ್ರಕಾರ, ಸುಟ್ಟ ಗಾಯಾಳುಗಳ ನಿರ್ವಹಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಯು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. ತುರ್ತು ಶಸ್ತ್ರಚಿಕಿತ್ಸೆಯ ಸಂದರ್ಭ ಸೇರಿದಂತೆ ವೈದ್ಯರು ಮತ್ತು ಸಿಬ್ಬಂದಿ ಎಲ್ಲಾ ಸಮಯದಲ್ಲೂ ಲಭ್ಯವಿರುತ್ತಾರೆ.
ಸುಟ್ಟಗಾಯಗಳ ಘಟಕ ಮತ್ತು ವಿಶೇಷವಾದ ಕ್ರ್ಯಾಕರ್ ಬರ್ನ್ಸ್ ಪ್ರಕರಣಗಳಿಗೆ ಪ್ರತ್ಯೇಕ ಬ್ಲಾಕ್ ಕೂಡ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯ ಔಷಧ ದಾಸ್ತಾನಿನೊಂದಿಗೆ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷ ತಜ್ಞರನ್ನು ಒಳಗೊಂಡ ವೈದ್ಯರ ತಂಡ ಸೇವೆ ನೀಡಲು ಸಜ್ಜಾಗಿವೆ. ಮಹಿಳೆಯರು ಹಾಗೂ ಪುರುಷರಿಗೆ ತಲಾ 10 ಹಾಗೂ ಮಕ್ಕಳಿಗೆ 15 ಹಾಸಿಗೆಗಳು ಸೇರಿ ಒಟ್ಟು 35 ಹಾಸಿಗೆಗಳನ್ನು ಪಟಾಕಿ ಗಾಯಾಳುಗಳ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸುಟ್ಟ ರೋಗಿಗಳಿಗೆ ವೆಂಟಿಲೇಟರ್‌ನೊಂದಿಗೆ ಐಸಿಯು ಸೌಲಭ್ಯಗಳನ್ನು ಒದಗಿಸಲಾಗಿದೆ.
ಇನ್ನು ಪಟಾಕಿಯಿಂದ ಸಂಭವಿಸುವ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಮಧ್ಯೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಪಟಾಕಿ ಸಿಡಿತದಿಂದ ಯಾವುದೇ ಗಾಯಗಳಾದರೆ ಅನುಸರಿಸಬೇಕಾದ ನಿರ್ದೇಶನಗಳ ಕುರಿತು ಸಲಹೆಯನ್ನು ನೀಡಿದೆ.
"ಪಟಾಕಿಗಳಿಂದ ಸುಟ್ಟಗಾಯಗಳು ಉಂಟಾದರೆ, ಸುಡುವಿಕೆ ನಿಲ್ಲುವವರೆಗೆ ತಣ್ಣನೆಯ ನೀರನ್ನು ಗಾಯದ ಮೇಲೆ ಹರಿಯುವಂತೆ ಮಾಡಿ. ವೈದ್ಯರು ಸೂಚಿಸದ ಯಾವುದೇ ಮುಲಾಮುಗಳನ್ನು ಅಥವಾ ಕೆನೆಗಳನ್ನು ಹಚ್ಚಬೇಡಿ. ಏಕೆಂದರೆ ಅವು ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ" ಎಂದು ಎಚ್ಚರಿಸಿದೆಯ
ಸಲಹೆಯ ಪ್ರಕಾರ, ಗಾಯಗೊಂಡ ಪ್ರದೇಶವನ್ನು ಸ್ವಚ್ಛ, ಒಣ ಬಟ್ಟೆ ಅಥವಾ ಬ್ಯಾಂಡೇಜ್ ನಿಂದ ಮುಚ್ಚಿ.
ಹಸಿರು ಪಟಾಕಿಗಳಲ್ಲೂ ಮನುಷ್ಯನ ದೇಹಕ್ಕೆ ಹಾನಿ ಉಂಟು ಮಾಡುವ ರಾಸಾಯನಿಕಗಳಿರುತ್ತವೆ. ಮಾಲಿನ್ಯ ಪ್ರಮಾಣ ಕಡಿಮೆಯಾದರೂ, ಸ್ಫೋಟ ಮತ್ತು ಶಬ್ಧದ ತೀವ್ರತೆ ಸಾಮಾನ್ಯ ಪಟಾಕಿಗಳಂತೆಯೇ ಇರುತ್ತದೆ. ಹಾಗಾಗಿ ಜಾಗ್ರತೆಯಿಂದ ಇರಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.
Advertisement