ಕರ್ನಾಟಕ ಸುವರ್ಣ ಸಂಭ್ರಮ 50: ಎಲ್ಲಾ ಜಿಲ್ಲೆಗಳಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನೆಗೆ ಸರ್ಕಾರ ಮುಂದು!

ಹಲ್ಮಿಡಿ ಶಾಸನವು ಕದಂಬ ಲಿಪಿಯಲ್ಲಿರುವ ಅತ್ಯಂತ ಹಳೆಯ ಕನ್ನಡ ಶಾಸನವಾಗಿದೆ. ಇದನ್ನು ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ 1936 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಪುರಾತತ್ವ ನಿರ್ದೇಶಕರಾಗಿದ್ದ ಡಾ.ಎಂ.ಎಚ್.ಕೃಷ್ಣ ಅವರು ಪತ್ತೆ ಮಾಡಿದರು.
ಹಲ್ಮಿಡಿ ಶಾಸನ
ಹಲ್ಮಿಡಿ ಶಾಸನ
Updated on

ಬೆಂಗಳೂರು: ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿದ್ದು. ಈ ನಡುವೆ ರಾಜ್ಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ.

ಇದನ್ನು ಸ್ಮರಣೀಯ ಕಾರ್ಯಕ್ರಮವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು, ಇದರಂತೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಕನ್ನಡದ ಮೊದಲ ಶಿಲಾ ಶಾಸನ ‘ಹಲ್ಮಿಡಿ ಶಾಸನ'ದ ಕಲ್ಲಿನ ಪ್ರತಿಕೃತಿ ರಚಿಸಿ, ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಷ್ಠಾಪಿಸಲು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಈ ಪ್ರತಿಕೃತಿಗಳನ್ನು ರಚಿಸುವ ಜವಾಬ್ದಾರಿಯನ್ನು ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯಕ್ಕೆ ನೀಡಲಾಗಿದ್ದು, ಜಿಲ್ಲಾಡಳಿತದ ವತಿಯಿಂದ ಶಿಲಾಶಾಸನವನ್ನು ಪ್ರತಿಷ್ಠಾಪನೆ ಮಾಡಿ ನ. 1 ರಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ಅನಾವರಣ ಮಾಡಿಸಲು ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಎಚ್‌ಡಿ ಕೋಟೆಯಿಂದ ತರಿಸಿದ ಕಲ್ಲಿನಿಂದ ಹಲ್ಮಿಡಿ ಶಿಲಾಶಾಸನವನ್ನು ಚಿಕ್ಕಮಗಳೂರಿನಲ್ಲಿ ಸಿದ್ದಪಡಿಸಲಾಗಿದೆ. ಹೀಗೆ ಸಿದ್ದವಾದ ಶಿಲಾ ಶಾಸನದ ಪ್ರತಿಕೃತಿಯನ್ನು ಎಲ್ಲ ಜಿಲ್ಲಾ ಕೇಂದ್ರಗಳಿಗೆ ಈಗಾಗಲೇ ಕಳುಹಿಸಲಾಗಿದ್ದು, ಪ್ರತಿಷ್ಠಾಪನೆ ನಡೆಸುವ ಸ್ಥಳಗಳಲ್ಲಿ ಕಲ್ಲಿನ ಪ್ರತಿಕೃತಿ ತಂದು ನಿಲ್ಲಿಸಲಾಗಿದೆ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವಕರಾಮ ಆಚಾರ್ಯ ತಿಳಿಸಿದ್ದಾರೆ.

ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಎಸ್.ಪಿ.ಜಯಣ್ಣಾಚಾರ್ ಅವರ ಮಾರ್ಗದರ್ಶನದಲ್ಲಿ ಮಹಾವಿದ್ಯಾಲಯದ 15 ಕಲಾವಿದರು ಹಾಗೂ ಮೈಸೂರು, ಗದಗ, ತುಮಕೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರಿನ ಇತರ 15 ಮಂದಿ ಕಲಾವಿದರು ಶಾಸನದ ಪ್ರತಿಕೃತಿ ಕೆತ್ತುವ ಕಾರ್ಯವನ್ನು ಮಾಡಿದ್ದಾರೆ. ಕಲಾವಿದರು 15 ದಿನಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಿದ್ದಾರೆಂದು ಹೇಳಿದ್ದಾರೆ.

ಹಲ್ಮಿಡಿ ಶಾಸನ
ಕನ್ನಡ ರಾಜ್ಯೋತ್ಸವ: 69 ಸಾಧಕರ ಆಯ್ಕೆಗೆ ಸಮಿತಿ ರಚನೆ

ಒಂದೊಂದು ಪ್ರತಿಕೃತಿಯು 400-500 ಕೆಜಿ ತೂಕ, 4.5 ಅಡಿ ಎತ್ತರ, 6 ಇಂಚು ದಪ್ಪ ಮತ್ತು ಒಂದು ಅಡಿ ಅಗಲವಿದೆ. ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಕನ್ನಡ ಭವನ ಅಥವಾ ರಂಗಮಂದಿರದ ಆವರಣದಲ್ಲಿ ಸ್ಥಳಾವಕಾಶದ ಲಭ್ಯತೆಗೆ ಅನುಗುಣವಾಗಿ ಪ್ರತಿಷ್ಠಾಪನೆಗೆ ಜಿಲ್ಲೆಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ ಎಂದು ವರದಿಗಳಿದ ತಿಳಿದುಬಂದಿದೆ.

ಪ್ರತಿಕೃತಿ ಪ್ರತಿಷ್ಠಾಪನೆಗೆ ಚಿಕ್ಕಮಗಳೂರಿನಲ್ಲಿ ಡಿಸಿ ಕಚೇರಿ ಮುಂಭಾಗದ ಪಾರ್ಕ್‌ನಲ್ಲಿ ಈಗಾಗಲೇ ಪೀಠ ಸಿದ್ಧಗೊಂಡಿದೆ. ಉಳಿದ ಜಿಲ್ಲೆಗಳಲ್ಲಿ ಈಗಾಗಲೇ ಆಯಾ ಜಿಲ್ಲಾ ಕೇಂದ್ರಗಳು ಸಿದ್ಧತೆಗಳ ಕೈಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲ್ಮಿಡಿ ಶಾಸನವು ಕದಂಬ ಲಿಪಿಯಲ್ಲಿರುವ ಅತ್ಯಂತ ಹಳೆಯ ಕನ್ನಡ ಶಾಸನವಾಗಿದೆ. ಇದನ್ನು ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ 1936 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಪುರಾತತ್ವ ನಿರ್ದೇಶಕರಾಗಿದ್ದ ಡಾ. ಎಂ.ಎಚ್.ಕೃಷ್ಣ ಅವರು ಪತ್ತೆ ಮಾಡಿದರು. 4 ನೇ ಶತಮಾನದಷ್ಟು ಹಿಂದಿನ ಕನ್ನಡ ಶಿಲಾಶಾಸನವನ್ನು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಗಡಿಯಲ್ಲಿರುವ ಹಲ್ಮಿಡಿ ಗ್ರಾಮದಲ್ಲಿ ಪತ್ತೆ ಮಾಡಲಾಗಿತ್ತು. ಈ ಗ್ರಾಮ ಈಗ ಪ್ರವಾಸಿಗರ ಆಕರ್ಷಣೆಯಾಗಿ ಮಾರ್ಪಟ್ಟಿದೆ. ಶಾಸನವು ಹದಿನಾರು ಸಾಲುಗಳನ್ನು ಹೊಂದಿದ್ದು, ಮರಳ ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಇದು ಹಳಗನ್ನಡ ಹಾಗೂ ಬ್ರಾಹ್ಮೀ ಲಿಪಿಗಳನ್ನು ಹೋಲುವಂತಹ ಕನ್ನಡ ಲಿಪಿಯಲ್ಲಿದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದಾಗಿದೆ.

ಶತೃರಾಜರ ಮೇಲೆ ಹೋರಾಡಿ ಗೆದ್ದ ವಿಜಯರಸ ಎಂಬ ಯೋಧನಿಗೆ, ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ದತ್ತಿಯಾಗಿ ಬಿಟ್ಟ ರಾಜಾಜ್ಞೆಯನ್ನು ಈ ಶಾಸನ ನಿರೂಪಿಸುತ್ತದೆ. ಹಲ್ಮಿಡಿ ಶಾಸನ ಸಂಸ್ಕೃತ ಪ್ರಭಾವಕ್ಕೆ ಒಳಗಾಗಿದ್ದರೂ, ಆ ಕಾಲದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಲಾಗುತ್ತಿತ್ತು ಎಂಬುದನ್ನು ಇದು ತೋರಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com