2024-25 ಆರ್ಥಿಕ ವರ್ಷದಲ್ಲಿ ಕರ್ನಾಟಕ ಉತ್ತಮ ವಿತ್ತೀಯ ಸಾಧನೆ: ಮೊದಲ 7 ತಿಂಗಳಲ್ಲೇ ಶೇ.53ರಷ್ಟು ರಾಜಸ್ವ ಸಂಗ್ರಹ!

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ 1.95 ಲಕ್ಷ ಕೋಟಿ ರೂ.ಆದಾಯ ಸಂಗ್ರಹ ಗುರಿ ಹೊಂದಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ 1.03 ಲಕ್ಷ ಕೋಟಿ ರೂ.ಆದಾಯ ಸಂಗ್ರಹಿಸುವ ಮೂಲಕ ನಿಗದಿತ ಗುರಿಯ ಶೇ.53ರಷ್ಟು ಗುರಿ ಮುಟ್ಟಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ಆದಾಯ ಸಂಗ್ರಹಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ಆರ್ಥಿಕ ವರ್ಧ 7 ತಿಂಗಳಲ್ಲಿಯೇ ಶೇ.53ರಷ್ಟು ಗುರಿ ಮುಟ್ಟಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ 1.95 ಲಕ್ಷ ಕೋಟಿ ರೂ.ಆದಾಯ ಸಂಗ್ರಹ ಗುರಿ ಹೊಂದಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ 1.03 ಲಕ್ಷ ಕೋಟಿ ರೂ.ಆದಾಯ ಸಂಗ್ರಹಿಸುವ ಮೂಲಕ ನಿಗದಿತ ಗುರಿಯ ಶೇ.53ರಷ್ಟು ಗುರಿ ಮುಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆದಾಯ ಸಂಗ್ರಹದಲ್ಲಿ ಶೇ,11.2ರಷ್ಟು ಪ್ರಗತಿ ಸಾಧಿಸಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆದಾಯವು ಐದು ಪ್ರಮುಖ ಆದಾಯ ಇಲಾಖೆಗಳಾದ ವಾಣಿಜ್ಯ ತೆರಿಗೆ (GST), ಅಬಕಾರಿ, ಗಣಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾರಿಗೆಗಳ ಮೂಲಕ ಸೃಜನೆಯಾಗಿದೆ. ವಾರ್ಷಿಕ ಬೆಳವಣಿಗೆ ದರ ಶೇ.11.2ರಷ್ಟು ಇದ್ದು, ಈ ಸಾಧನೆಯು ರಾಜ್ಯದ ಸದೃಢ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ಗ್ರಾಹಕರ ಕೊಳ್ಳುವ ಸಾಮರ್ಥ್ಯ ಹಾಗೂ ಬೇಡಿಕೆಯ ಹೆಚ್ಚಳ, ಉತ್ತಮ ಆಡಳಿತ, ಉದ್ಯಮ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಸರ್ಕಾರದ ಗುರಿಯನ್ನು ಪ್ರತಿಬಿಂಬಿಸುತ್ತದೆ.

ಕರ್ನಾಟಕವು 2023-24ರಲ್ಲಿ 3ನೇ ಸ್ಥಾನದಿಂದ (ಗುಜರಾತ್‌ ಅನ್ನು ಮೀರಿಸುವ ಮೂಲಕ) 2024-25ರ ಮೊದಲ ತ್ರೈಮಾಸಿಕದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗಳಲ್ಲಿ 2ನೇ ಸ್ಥಾನಕ್ಕೇರುವ ಮೂಲಕ ಜಾಗತಿಕವಾಗಿ ಹೂಡಿಕೆ ಸ್ನೇಹಿ ರಾಜ್ಯವಾಗಿ ಗುರುತಿಸಿಕೊಂಡಿದೆ. ಕರ್ನಾಟಕವು ಮೊದಲ ತ್ರೈಮಾಸಿಕದಲ್ಲಿ ಒಟ್ಟಾರೆ $2.2 ಬಿಲಿಯನ್ ಹೂಡಿಕೆಗಳನ್ನು ಆಕರ್ಷಿಸಿದೆ, ಇದು ರಾಜ್ಯದ ಪ್ರಗತಿಶೀಲ ಆರ್ಥಿಕ ನೀತಿಗಳ ಬಗೆಗೆ ಹೂಡಿಕೆದಾರರ ನಂಬಿಕೆಯನ್ನು ಸೂಚಿಸುತ್ತದೆ.

52,009 ಕೋಟಿ ರೂ.ಗಳ ಬಜೆಟ್‌ ಮೊತ್ತದಲ್ಲಿ 24,235 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡುವ ಮೂಲಕ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಿದೆ. ಇ–ಆಡಳಿತ ಮಾದರಿಗಳ ಪರಿಣಾಮಕಾರಿ ಬಳಕೆಯಿಂದ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ಮೂಲಕ ಹಾಗೂ ಅಸಮರ್ಥತೆಯನ್ನು ನಿವಾರಿಸುವ ಮೂಲಕ ಕಲ್ಯಾಣ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಹಕಾರಿಯಾಗಿವೆ. ಕರ್ನಾಟಕದ ಆರ್ಥಿಕ ಬೆಳವಣಿಗೆಯ ದರವನ್ನು (ಜಿಎಸ್ ಡಿ ಪಿ) ಶೇ.14 ಕ್ಕೆ ತಲುಪಿಸಲು ಈ ಹಣಕಾಸು ವರ್ಷದಲ್ಲಿ ಜಿ ಎಸ್‌ ಡಿ ಪಿ ಯ 2% ಕ್ಕಿಂತ ಮೇಲೆಯೇ ಬಂಡವಾಳ ವೆಚ್ಚವನ್ನು ನಿರ್ವಹಿಸಲು ಉದ್ದೇಶಿಸಿದೆ. ರಾಜ್ಯದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗಳನ್ನು ಹೆಚ್ಚಿಸಲು ಎರಡು ಸಾಧನಗಳನ್ನು ಬಳಸಲಾಗುತ್ತಿದೆ.

File photo
ಉದ್ಯೋಗಾವಕಾಶ, ವೇತನ ವೃದ್ಧಿಯಲ್ಲಿ ಬೆಂಗಳೂರು ದೇಶದಲ್ಲೇ ನಂಬರ್‌ 1: ಸಿಎಂ ಸಿದ್ದರಾಮಯ್ಯ ಹೇಳಿದ್ದು ಹೀಗೆ...

ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಶ್ವ ಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮುಂತಾದ ವಿವಿಧ ವಿದೇಶಿ ವಾಣಿಜ್ಯ ಸಂಸ್ಥೆಗಳೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ. ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳೊಂ ರೂ.16,750 ಕೋಟಿ ಹೂಡಿಕೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ, ಇದರಲ್ಲಿ, ಬೆಂಗಳೂರುನಲ್ಲಿ ವಿಪತ್ತು ನಿಯಂತ್ರಣ ಯೋಜನೆಗಳು-3,500 ಕೋಟಿ ರೂ., ಕರಾವಳಿ ಕರ್ನಾಟಕದಲ್ಲಿ ನೀಲಿ ಆರ್ಥಿಕತೆ ಪರಿವರ್ತನೆ-600 ಕೋಟಿ ರೂ., ನಗರ ಜಲಸರಬರಾಜು ಆಧುನೀಕರಣ-1,200 ಕೋಟಿ ರೂ., ಸರ್ವಋತು ಗ್ರಾಮೀಣ ರಸ್ತೆಗಳು (ಪ್ರಗತಿಪಥ)-3,600 ಕೋಟಿ ರೂ., ರಾಜ್ಯ ಹೆದ್ದಾರಿಗಳ ಸುಧಾರಣೆ–3,650 ಕೋಟಿ ರೂ., ನೀರಾವರಿ-500 ಕೋಟಿ ರೂ., ಸಾರ್ವಜನಿಕ ಶಾಲಾ ಮೂಲಸೌಕರ್ಯ ಅಭಿವೃದ್ಧಿ– 2,800 ಕೋಟಿ ರೂ., ಸಾರ್ವಜನಿಕ ಸಾರಿಗೆಗಾಗಿ ಎಲೆಕ್ಟ್ರಿಕ್ ಬಸ್ಸುಗಳು–1,400 ಕೋಟಿ ರೂ.ಗಳು ಸೇರಿವೆ.

ಬೆಂಗಳೂರು ನಗರದ ಮೂಲ ಸೌಕರ್ಯ 1,13,500 ಕೋಟಿ ರೂ.ಮೌಲ್ಯದ ಯೋಜನೆಗಳೊಂದಿಗೆ ಪರಿವರ್ತನೆಯತ್ತ ಹೋಗುತ್ತಿದೆ. ಈ ಹೂಡಿಕೆಗಳು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು, ಹೆಚ್ಚಿನ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಆಕರ್ಷಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಬೆಂಗಳೂರನ್ನು ಜಾಗತಿಕ ವಹಿವಾಟು ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ಮಾಡಲು ರೂಪಿಸಲಾಗಿದೆ.

100 ಕಿಮೀ ಎಲಿವೇಟೆಡ್ ಮಾರ್ಗ—12 ಸಾವಿರ ಕೋಟಿ ರೂ., ಡಬಲ್ ಡೆಕ್ಕರ್ ಮೆಟ್ರೋ ಲೈನ್‍ಗಳು—9 ಸಾವಿರ ಕೋಟಿ ರೂ., ಹಂತ -3 ಮತ್ತು 3ಎ ಅಡಿಯಲ್ಲಿ 80 ಕಿಮೀ ಹೆಚ್ಚುವರಿ ಮೆಟ್ರೋ—40 ಸಾವಿರ ಕೋಟಿ ರೂ., ಭಾರತದ ಅತಿ ಉದ್ದದ 40 ಕಿಮೀ ಸುರಂಗ ಮಾರ್ಗ— 40 ಸಾವಿರ ಕೋಟಿ ರೂ., ಫೆರಿಫೆರಲ್ ರಸ್ತೆ ಜಾಲ ಅಭಿವೃದ್ಧಿ—3 ಸಾವಿರ ಕೋಟಿ ರೂ., ಸ್ಕೈ ಡೆಕ್ ಯೋಜನೆ—500 ಕೋಟಿ ರೂ. ಹಾಗೂ ಬೆಂಗಳೂರು ವಾಣಿಜ್ಯ ಕಾರಿಡಾರ್—27 ಸಾವಿರ ಕೋಟಿ ರೂ.ಗಳ ಯೋಜನೆಗಳೊಂದಿಗೆ ರೂಪಾಂತರಕ್ಕೆ ಸಿದ್ಧವಾಗಿದೆ.

ಕರ್ನಾಟಕದ ಆರ್ಥಿಕ ನಿರ್ವಹಣಾ ಕಾರ್ಯತಂತ್ರಗಳಿಂದ ಜನ ಕಲ್ಯಾಣ ಗ್ಯಾರಂಟಿ ಯೋಜನೆಗಳ ಬಂಡವಾಳ ಹೂಡಿಕೆಗೆ, ಅಭಿವೃದ್ಧಿಯ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಉದ್ದೇಶಿತ ಸುಧಾರಣೆಯ ಗುರಿಗಳು ಮತ್ತು ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆಗಳ ಮೂಲಕ ರಾಜ್ಯವು ಅಭಿವೃದ್ಧಿಯ ಹೊಸ ಮಾದರಿಯನ್ನು ನಿರ್ಮಿಸಿದ್ದು, ಇದು ಆರ್ಥಿಕ ನಿರ್ವಹಣೆ ಮತ್ತು ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ರಾಜ್ಯವನ್ನು ಮುಂಚೂಣಿಯಲ್ಲಿರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com